ತುಂಗಭದ್ರ ಜಲಾಶಯ ವ್ಯಾಪ್ತಿಯ ದರೋಜಿ ಬಳಿ ಸುರಂಗದಲ್ಲಿನ ಎಚ್‌ಎಲ್‌ಸಿ ಕಾಲುವೆಯನ್ನು ಹಣಕಾಸು ಸಚಿವ ಪಯ್ಯವಲು ಕೇಶವ ಟ್ರಾೃಕ್ಟರ್‌ನಲ್ಲಿ ಪ್ರಯಾಣಿಸಿ ಪರಿಶೀಲಿಸಿದರು. ರಾಯದುರ್ಗ ಶಾಸಕ ಶ್ರೀನಿವಾಸಲು, ಇಂಜನಿಯರ್ ನಾರಾಯಣರಾವ್ ನಾಯ್ಕ ಇತರರಿದ್ದರು. 
ಬಳ್ಳಾರಿ

ಟ್ರಾೃಕ್ಟರ್ ಹತ್ತಿ ಕಾಲುವೆ ಪರಿಶೀಲಿಸಿದ ಸಚಿವ

ಪ್ರಮುಖ ಮುಖ್ಯಾಂಶಗಳು

  • ಕಾಲುವೆ
ಬಳ್ಳಾರಿ : ತುಂಗಭದ್ರಾ ಜಲಾಶಯದ ವ್ಯಾಪ್ತಿಯ ಎಚ್‌ಎಲ್‌ಸಿ ಕಾಲುವೆಯ ಸ್ಥಿತಿಗತಿಯನ್ನು ಆಂಧ್ರಪ್ರದೇಶದ ಹಣಕಾಸು ಸಚಿವ ಪಯ್ಯವಲು ಕೇಶವ ಅವರು ಅಧಿಕಾರಿಗಳೊಂದಿಗೆ ಟ್ರಾೃಕ್ಟರ್‌ನಲ್ಲಿ ಪ್ರಯಾಣಿಸಿ ಪರಿಶೀಲಿಸಿದರು.
ಜಲಾಶಯದಿಂದ 105 ಕಿ.ಮೀ. ವ್ಯಾಪ್ತಿಯು ತುಂಗಭದ್ರಾ ಮಂಡಳಿಯ ಅಧೀನ ಒಳಪಡುತ್ತದೆ. ಈ ಭಾಗದ ಕಾಲುವೆಯನ್ನು ಕಳೆದ ಏಳು ವರ್ಷಗಳ ಹಿಂದೆಯೇ ಮಂಡಳಿಯು ಸಾವಿರ ಕೋಟಿ ರೂ. ಅನುದಾನದಲ್ಲಿ ದುರಸ್ತಿಗೊಳಿಸಲಾಗಿದೆ. ಆದರೆ, ಪ್ರಮುಖವಾಗಿ ತೋರಣಗಲ್ ವಿಭಾಗದ 36 ಕಿ.ಮೀ. ವ್ಯಾಪ್ತಿಯಲ್ಲಿ ದರೋಜಿ ಸಮೀಪದ ಬೆಟ್ಟ ಅಗೆದು ಕಾಲುವೆ ನಿರ್ಮಿಸಿರುವುದರಿಂದ, ಆ ಭಾಗದಲ್ಲಿ ನೀರು ಸರಾಗವಾಗಿ ಹರಿಯದೆ ನಿಲ್ಲುತ್ತಿದೆ. ಇದರಿಂದಾಗಿ ಕೆಳಭಾಗದ ಪ್ರದೇಶಗಳಿಗೆ ನಿಗದಿತ ಪ್ರಮಾಣದ ನೀರು ತಲುಪಲು ತೊಂದರೆಯಾಗುತ್ತಿದೆ ಎಂಬುದಾಗಿ ಮಂಡಳಿಯ ಇಂಜಿನಿಯರ್‌ಗಳು ಸಚಿವರಿಗೆ ವಿವರಿಸಿದರು. ಈ ಹಿನ್ನಲೆಯಲ್ಲಿ ಕಾಲುವೆ ಮತ್ತೊಮ್ಮೆ ಸಮರ್ಪಕವಾಗಿ ದುರಸ್ತಿಗೊಳಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಇದೇ ವೇಳೆ ಸಚಿವ ಪಯ್ಯವಲು ಕೇಶವ ಟ್ರ್ಯಾಕ್ಟರ್ ಹತ್ತಿ ಪ್ರಯಾಣಿಸಿ ಕಾಲುವೆ ಪರಿಶೀಲಿಸಿದ್ದು ಗಮನ ಸೆಳೆಯಿತು. ಅಧಿಕಾರಿಗಳ ತಂಡದೊಂದಿಗೆ ಕಾಲುವೆಯ ಪ್ರತಿ ಹಂತವನ್ನು ಸೂಕ್ಷ್ಮವಾಗಿ ವೀಕ್ಷಿಸಿ, ರೈತರಿಗೆ ಮತ್ತು ನೀರಾವರಿ ವ್ಯವಸ್ಥೆಗೆ ತೊಂದರೆಯಾಗದಂತೆ ಕಾಲುವೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.