ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆ ಹೊರಡಿಸಲು ಹಾಗೂ ತುಟ್ಟಿ ಭತ್ಯೆ ಹೆಚ್ಚಿಸಲು ಆಗ್ರಹಿಸಿ ಕೂಡ್ಲಿಗಿಯಲ್ಲಿ ಕಾರ್ಮಿಕ ನಿರೀಕ್ಷಕ ಗಂಗಾಧರಗೆ ಎಐಟಿಯುಸಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಿಪಿಐ ತಾಲೂಕು ಕಾರ್ಯದರ್ಶಿ ಕರಿಯಪ್ಪ, ಕಟ್ಟಡ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ಯು.ಪೆನ್ನಪ್ಪ, ಎಐಟಿಯುಸಿ ಮುಖಂಡ ವೈ.ಮಲ್ಲಿಕಾರ್ಜುನ, ಸಂಚಾಲಕ ಡಿ.ಅನಂತೇಶ್, ಓಬಳೇಶ್, ಮಹೇಶ, ನಾಗರಾಜ, ಮಹಿಳಾ ಒಕ್ಕೂಟದ ತಾಲೂಕು ಅಧ್ಯಕ್ಷೆ ಮಮತಾ, ದುರ್ಗಾವತಿ ಇದ್ದರು.
- ಕಾರ್ಮಿಕ ನಿರೀಕ್ಷಕ ಗಂಗಾಧರಗೆ ಮನವಿ
- ಕೂಡ್ಲಿಗಿ ಎಐಟಿಯುಸಿ ಪದಾಧಿಕಾರಿಗಳ ಆಗ್ರಹ
ಕೂಡ್ಲಿಗಿ: ಕನಿಷ್ಠ ವೇತನ ಪರಿಷ್ಕರಣೆಯ ಅಂತಿಮ ಅಧಿಸೂಚನೆ ಹೊರಡಿಸುವುದು ಹಾಗೂ ತುಟ್ಟಿಭತ್ಯೆ ಹೆಚ್ಚಿಸಲು ಆಗ್ರಹಿಸಿ ಎಐಟಿಯುಸಿ ಪದಾಧಿಕಾರಿಗಳು ಶುಕ್ರವಾರ ಕಾರ್ಮಿಕ ನಿರೀಕ್ಷಕ ಗಂಗಾಧರಗೆ ಮನವಿ ಸಲ್ಲಿಸಿದರು.
ಕಾರ್ಮಿಕ ಮುಖಂಡ ಎಚ್.ವೀರಣ್ಣ ಮಾತನಾಡಿ, ಕನಿಷ್ಠ ವೇತನ ಎಂಬುದು ದಾನವಲ್ಲ, ಅದು ಕಾರ್ಮಿಕನ ಶ್ರಮದ ಘನತೆಯನ್ನು ಕಾಪಾಡುವ ಸಂವಿಧಾನಿಕ ಹಕ್ಕು ಆಗಿದೆ. 1992ರಲ್ಲಿ ಸುಪ್ರೀಂಕೋರ್ಟ್ ಕನಿಷ್ಠ ವೇತನ ಬದುಕಲು ಪೂರಕ ಆಗಿರಬೇಕು ಎಂದು ಮಹತ್ವದ ತೀರ್ಪು ನೀಡಿದೆ.
ದುಡಿಯುವ ಪ್ರತಿಯೊಬ್ಬ ವ್ಯಕ್ತಿಗೆ 2700 ಕ್ಯಾಲರಿ ಪೌಷ್ಟಿಕಾಂಶ, ಕುಟುಂಬಕ್ಕೆ 72 ಗಜ ಬಟ್ಟೆ, ಮನೆ ಬಾಡಿಗೆಯಲ್ಲದೆ ಇಂಧನ ಮತ್ತು ಬೆಳಕಿನ ವ್ಯವಸ್ಥೆಗಾಗಿ ಶೇ.20 ಹಾಗೂ ಮಕ್ಕಳ ಶಿಕ್ಷಣ ವೈದ್ಯಕೀಯ ಅವಶ್ಯಕತೆಗಳಿಗಾಗಿ ಶೇ.25 ಸಂಭಾವನೆಯೂ ಕನಿಷ್ಠ ವೇತನದಲ್ಲಿ ಒಳಗೊಂಡಿರಬೇಕೆಂದು ಸೂಚಿಸಿದೆ. ಆದರೆ, ಈ ನಿಯಮಗಳು ಪಾಲನೆಯಾಗುತ್ತಿಲ್ಲ ಎಂದು ದೂರಿದರು.
ಗಾರ್ಮೆಂಟ್ಸ್, ಬೀಡಿ, ಅಗರಬತ್ತಿ ಮತ್ತು ಪ್ಲಾಂಟೇಷನ್ ವಲಯಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಶೇ.40 ವೇತನ ಅಸಮಾನತೆಯನ್ನು ಏಕರೂಪದ ಅಧಿಸೂಚನೆಯ ಮೂಲಕ ಷೆಡ್ಯೂಲ್‌ವಾರು ತಾರತಮ್ಯ ಅಂತ್ಯಗೊಳಿಸಬೇಕೆಂದು ಆಗ್ರಹಿಸಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಕರಿಯಪ್ಪ, ಕಟ್ಟಡ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ಯು.ಪೆನ್ನಪ್ಪ, ಎಐಟಿಯುಸಿ ಮುಖಂಡ ವೈ.ಮಲ್ಲಿಕಾರ್ಜುನ, ಸಂಚಾಲಕ ಡಿ.ಅನಂತೇಶ್, ಓಬಳೇಶ್, ಮಹೇಶ, ನಾಗರಾಜ, ಮಹಿಳಾ ಒಕ್ಕೂಟದ ತಾಲೂಕು ಅಧ್ಯಕ್ಷೆ ಮಮತಾ, ದುರ್ಗಾವತಿ ಇದ್ದರು.