ಲಾರಿಗಳಲ್ಲಿ ಗುಳೆ ಹೊರಟ ಶ್ರೀಕಂಠಾಪುರ ತಾಂಡಾದ ಜನ 
ಬಳ್ಳಾರಿ

ಹೊಟ್ಟೆ ಪಾಡಿಗಾಗಿ ಕೃಷಿಕರ ವಲಸೆ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ಲಾರಿಗಳಲ್ಲಿ ಅಗತ್ಯ ವಸ್ತುಗಳೊಂದಿಗೆ ಊರು ಬಿಡುತ್ತಿರುವ ತಾಂಡಾ ಜನತೆ
  • ದಕ್ಷಿಣದ ಜಿಲ್ಲೆಗಳತ್ತ ಶ್ರಮಿಕರ ಗುಳೆ
ವೀರೇಶ ಅಂಗಡಿ 
ಕೂಡ್ಲಿಗಿ: ಶ್ರೀಕಂಠಾಪುರ, ಬಿ.ಬಿ. ತಾಂಡಾದ ಜನರು ಮೂರು ಲಾರಿಗಳಲ್ಲಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ತುಂಬಿಕೊಂಡು ಬದುಕಿನ ಆಧಾರಕ್ಕಾಗಿ ಒಟ್ಟಿಗೆ ಗುಳೆ ಹೊರಟಿರುವುದು ಮುಂಗಾರು ವೈಫಲ್ಯದ ಭೀಕರತೆಗೆ ಸಾಕ್ಷಿಯಾಗಿದೆ.
ಬದುಕಿನ ಆಧಾರವನ್ನೇ ಕಳೆದುಕೊಂಡ ಗ್ರಾಮೀಣ ಜನತೆ ಜೀವನಾಧಾರಕ್ಕಾಗಿ ಬೇಗನೇ ಗುಳೆ ಹೋಗುವ ಕಡುವಾಸ್ತವಕ್ಕೆ ಮುಖಾಮುಖಿಯಾಗಿದ್ದಾರೆ. ಇಡೀ ತಾಲೂಕು ಕೃಷಿಯನ್ನೇ ನೆಚ್ಚಿ ಇಲ್ಲಿನ ಜನ ಬದುಕು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಹಂಗಾಮಿನಲ್ಲಿ ತಾಲೂಕಿನಾದ್ಯಂತ ಸುಮಾರು 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. 
ಆದರೆ, ಮಳೆ ಇಲ್ಲದೆ ಕೇವಲ 14 ಸಾವಿರ ಹೆಕ್ಟೇರ್‌ನಷ್ಟು ಬಿತ್ತನೆ ಮಾಡಿದ್ದಾರೆ. ಅದು ಕೊಳವೆ ಬಾವಿ ಆಶ್ರಿತ ರೈತರು ಮಾತ್ರ ಬಿತ್ತನೆ ಮಾಡಿದ್ದು, ಆ ಫಸಲು ಕೂಡ ರೈತರ ಕೈ ಸೇರುವುದು ಕಷ್ಟ ಸಾಧ್ಯ ಎನ್ನುತ್ತಾರೆ ರೈತರು. ಜೂನ್, ಜುಲೈ ತಿಂಗಳಲ್ಲಿ ಸುಮಾರು 82 ಮಿ.ಮೀ ಮಳೆ ಬರಬೇಕಿತ್ತು, ಆದರೆ ಕೇವಲ 44 ಮಿ.ಮೀ ಬಂದಿದೆ. ಶೇ 46 ಕಡಿಮೆ ಬಿದ್ದಿದೆ. ಇದರಿಂದ ರೈತರು ಸಹಜವಾಗಿ ಕಂಗಲಾಗಿದ್ದು, ಜೀವನೋಪಾಯಕ್ಕಾಗಿ ಮುಂದೇನು ಮಾಡುವುದು ಎನ್ನುವುದೇ ಚಿಂತೆಯಾಗಿದೆ.

ಬೇಗನೇ ಆರಂಭವಾದ ಗುಳೆ ತಲ್ಲಣ

ವಿವಿಧ ಗ್ರಾಮ ಹಾಗೂ ತಾಂಡಾಗಳಲ್ಲಿ ಪ್ರತಿ ವರ್ಷ ಜನರು ಗುಳೆ ಹೋಗುವುದು ಸಾಮಾನ್ಯ. ಆದರೆ ಗುಳೆ ಹೋಗುವ ಹೊತ್ತಿಗೆ ಇರುವ ಅಲ್ಪಸ್ವಲ್ಪ ಜಮೀನುಗಳಲ್ಲಿ ಬಿತ್ತನೆ ಮಾಡಿ ಹೋಗುತ್ತಿದ್ದರು. ಆದರೆ ಈ ಬಾರಿ ಸಮರ್ಪಕವಾಗಿ ಮಳೆ ಇಲ್ಲದ ಅನೇಕ ಹೊಲಗಳಲ್ಲಿ ಇನ್ನೂ ಬಿತ್ತನೆಯೇ ಮಾಡಿಲ್ಲ. ಅಲ್ಲಲ್ಲಿ ಬಿತ್ತನೆ ಮಾಡಿದ್ದ ಎಳ್ಳು ಹಾಗೂ ಜೋಳ ಮಳೆ ಇಲ್ಲದೆ ಒಣಗಿ ಹೋಗಿದೆ. ಇದರಿಂದ ಈ ಬಾರಿ ಬೇಗನೆ ಗುಳೆ ಹೋಗಲು ಆರಂಭಿಸಿದ್ದಾರೆ. ಇನ್ನೊಂದು ವಾರದಲ್ಲಿ ಅನೇಕರು ಗುಳೆ ಹೋಗಲಿದ್ದಾರೆ ಎಂದು ಶ್ರೀಕಂಠಾಪುರ ತಾಂಡಾದ ತಾಲೂಕು ಬಂಜಾರ ಮುಖಂಡ ವೆಂಕಟೇಶ್ ನಾಯ್ಕ ಕಳವಳ ವ್ಯಕ್ತಪಡಿಸಿದ್ದಾರೆ.

ದಕ್ಷಿಣದ ಜಿಲ್ಲೆಗಳತ್ತ ಮುಖ

ಪ್ರತಿ ಬಾರಿಯೂ ನಮ್ಮಲ್ಲಿನ ಜನ ಗುಳೆ ಹೋಗುತ್ತಾರೆ. ಆದರೆ ಈ ಬಾರಿ ಮಳೆ ಅಭಾವದ ಕಾರಣ ಇಲ್ಲಿ ಕೂಲಿ ಮಾಡಲು ಜನರಿಗೆ ಕೆಲಸವಿಲ್ಲ. ಇದರಿಂದ ಇಲ್ಲಿನ ಜನ ಕೆ.ಆರ್. ಪೇಟೆ, ಕಿಕ್ಕೇರಿ, ಚನ್ನರಾಯಪಟ್ಟಣ, ಮಂಡ್ಯ ಸೇರಿದಂತೆ ವಿವಿಧ ಕಡೆ ಕಬ್ಬು ಕಟಾವಿಗೆ ಹೋಗುತ್ತಿದ್ದಾರೆ. ಈಗಾಗಲೇ ತಾಲೂಕಿನ ರೈತರು ತಮ್ಮ ಜಮೀನುಗಳನ್ನು ಬಿತ್ತನೆ ಮಾಡಲು ಭೂಮಿ ಹಸನು ಮಾಡಿಕೊಂಡು ಕಾದು ಕುಳಿತಿದ್ದಾರೆ. ಆದರೆ ರೋಹಿಣಿ, ಮೃಗಶಿರಾ, ಆರಿದ್ರಾ ಹಾಗೂ ಪುನರ್ವಸು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು ಜೋಳ ಬಿತ್ತನೆ ಹಾಗೂ ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆಯಾಗಿದೆ. ಪರಿಸ್ಥಿತಿ ಹೀಗೇ ಆದರೆ ಹೊಟ್ಟೆಗೆ ಏನು ತಿನ್ನಬೇಕು ಎನ್ನುವುದೇ ಇಲ್ಲಿನ ರೈತರ ಚಿಂತೆ. ಶಾಸಕರು ಇಲ್ಲಿನ ಪರಿಸ್ಥಿತಿ ಅರಿತು ತಾಲೂಕನ್ನು ಬರ ಎಂದು ಘೋಷಿಸಬೇಕು, ದುಡಿಯುವ ಕೈಗೆ ಪರ್ಯಾಯ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
"

ಈಗಾಗಲೇ ಶೇ 60 ಮಳೆ ಕೊರತೆ ಪ್ರದೇಶವನ್ನು ಬರ ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿ ಸೂಚನೆ ಯಂತೆ ನಮ್ಮ ಜಿಲ್ಲೆಯನ್ನು ಮೊದಲ ಆದ್ಯತೆಯಾಗಿ ಸೇರಿಸಲಾಗುವುದು. ಅದಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಅಧಿಕಾರಿಗಳ ಜತೆ ಚರ್ಚೆ ಮಾಡಿ ಬೇಕಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

— ಡಾ.ಎನ್.ಟಿ.ಶ್ರೀನಿವಾಸ ಶಾಸಕ, ಕೂಡ್ಲಿಗಿ
"

ಈ ಬಾರಿ ತಾಲೂಕಿನಲ್ಲಿ ತೀವ್ರ ಬರ ಆವರಿಸಿದೆ. ಜನ, ಜಾನುವಾರನ್ನು ಬದುಕಿಸುವುದೇ ಕಷ್ಟಕರವಾಗಿದೆ. ಇರುವ ಅಲ್ಪ, ಸ್ವಲ್ಪ ಹಣವನ್ನು ಸಹ ಭೂಮಿ ಹದ ಮಾಡಿ, ಬೀಜ, ಗೊಬ್ಬರಕ್ಕೆ ಖರ್ಚು ಮಾಡಿದ್ದು, ಕುಟುಂಬ ಸಲಹುವುದೇ ಸವಾಲಾಗಿದೆ. ಈಗ ಮಳೆ ಬಿದ್ದರೂ ಕೇವಲ ರಾಗಿ ಮಾತ್ರ ಬೆಳೆಯಬಹುದಾಗಿದೆ.

— ಹನಸಿ ಶಿವಣ್ಣ ರೈತ ಕೂಡ್ಲಿಗಿ