ಪಾಲಿಕೆ ಬಜೆಟ್ ಸಭೆಗೆ ಸದಸ್ಯರ ಮುನಿಸು
ಬಳ್ಳಾರಿ : ನಗರದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಬೇಕಿದ್ದ ಮಹಾನಗರ ಪಾಲಿಕೆಯು ಕಳೆದ ಒಂದೂವರೆ ವರ್ಷದಿಂದ ಕೇವಲ ರಾಜಕೀಯ ಅಖಾಡವಾಗಿ ಮಾರ್ಪಟ್ಟಿದೆ. ಮೇಯರ್ ಆಯ್ಕೆಯ ಹಂತದಿಂದ ಆರಂಭವಾದ ಸದಸ್ಯರ ನಡುವಿನ ಮುನಿಸು ಇದೀಗ ಬಜೆಟ್ ಮಂಡನೆಯ ಸಭೆ ಮೇಲೆ ಪರಿಣಾಮ ಬೀರಿದೆ.
ಇದೇ ತಿಂಗಳು ಫೆ.16ಕ್ಕೆ ನಿಗದಿಯಾಗಿದ್ದ ಬಜೆಟ್ ಮಂಡನೆ ಹಾಗೂ ಸಾಮಾನ್ಯ ಸಭೆ ಮುಂದೂಡಿ ಫೆ.23ಕ್ಕೆ ನಿಗದಿಯಾಗಿರುವುದು ಪಾಲಿಕೆಯ ಆಂತರಿಕ ಭಿನ್ನಮತ ಬೀದಿಗೆ ತಂದಿದೆ. ಬಜೆಟ್ ಸಿದ್ಧಪಡಿಸುವ ಮುನ್ನ ಮೇಯರ್ ಅವರು ಸದಸ್ಯರೊಂದಿಗೆ ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ . ವಾರ್ಡ್‌ಗಳ ಸಮಸ್ಯೆಗಳನ್ನು ಆಲಿಸದೆ ಸಿದ್ಧಪಡಿಸಿರುವ ಬಜೆಟ್ ಮರುಪರಿಶೀಲಿಸಬೇಕು ಎಂಬುದಾಗಿ ಸದಸ್ಯರು ಪಟ್ಟು ಹಿಡಿದಿದ್ದಾರೆ. ಸದ್ಯ ಅಸಮಾಧಾನಿತ ಸದಸ್ಯರ ಮನವೊಲಿಸುವ ಕಸರತ್ತು ತೆರೆಮರೆಯಲ್ಲಿ ಜೋರಾಗಿ ನಡೆದಿದೆ.
ಇದೇ ತಿಂಗಳ ಫೆ.16 ರಂದು ನಿಗದಿಯಾಗಿದ್ದ ಪಾಲಿಕೆ ಬಜೆಟ್ ಮಂಡನೆ, ಸಾಮಾನ್ಯ ಸಭೆ ನಡೆಯಲು ಮೂರನೇ ಒಂದು ಭಾಗದಷ್ಟು ಶೇ.15 ರಷ್ಟು ಸದಸ್ಯರು ಸಭೆಯಲ್ಲಿ ಹಾಜರಿಬೇಕಿತ್ತು. ಕಾಂಗ್ರೆಸ್ 26, ಬಿಜೆಪಿಯ 13, ಇಬ್ಬರು ಸಂಸದರು, ಇಬ್ಬರು ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 44 ಸದಸ್ಯರ ಪೈಕಿ ಶೇ.15ರಷ್ಟು ಅಂದರೆ 15 ಸದಸ್ಯರು ಸಭೆಯಲ್ಲಿ ಹಾಜರಿದ್ದಲ್ಲಿ ಸಭೆ ನಡೆಯುತ್ತಿತ್ತು. ಆದರೆ, ಸ್ವಪಕ್ಷದ ಹದಿನೇಂಟು ಸದಸ್ಯರು ಮೇಯರ್ ವಿರುದ್ಧ ಅಸಮಾಧಾನಗೊಂಡು ಸಭೆ ಗೈರಯಾಗುವ ಸಾಧ್ಯತೆಯಿತ್ತು. ಸಭೆಗೆ ಸದಸ್ಯರ ಮುನಿಸುಕೊಂಡಿರುವ ಬಗ್ಗೆ ಮನಗಂಡ ಮೇಯರ್ ಪಿ.ಗಾದೆಪ್ಪ ಅವರು ನಿರ್ಣಯದ ಮೇರೆಗೆ ಸಭೆಯನ್ನು ಫೆ.23ಕ್ಕೆ ಮುಂದೂಡುವಂತೆ ಆಯುಕ್ತರಿಗೆ ಸೂಚಿಸಿದರು. ಅಲ್ಲದೆ, ಜಿಲ್ಲೆಯ ಇಬ್ಬರು ಶಾಸಕರು, ಎರಡು ಪಕ್ಷದ ಸದಸ್ಯರು ಜತೆ ಫೆ.19 ರಂದು ಬಜೆಟ್ ಮಂಡನೆ ಪೂರ್ವಭಾವಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ವಾರ್ಡ್ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಸದಸ್ಯರಿಂದ ಅವಲೋಕಿಸಿ ಅನುದಾನ ನೀಡುವ ಬಗ್ಗೆ ಚರ್ಚೆ ನಡೆಯಲಿದೆ ಎಂಬುದಾಗಿ ಮೂಲಗಳು ತಿಳಿಸಿದವು.
ಬಾಕ್ಸ್ : ಪಾಲಿಕೆಯ ಸಾರ್ವಜನಿಕ ಆಸ್ತಿಯನ್ನು ಹಣಕ್ಕಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಲಾಗುತ್ತಿದೆ ಎಂಬ ವಿರೋಧ ಪಕ್ಷದ ಆರೋಪ ನಗರದಲ್ಲಿ ಸಂಚಲನ ಮೂಡಿಸಿದೆ. ಕೆಲ ಭ್ರಷ್ಟ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಕೈವಾಡದಿಂದಾಗಿ ಪಾಲಿಕೆಯ ಆಸ್ತಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂಬುದಾಗಿ ಬಿಜೆಪಿ ಪಕ್ಷದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ನಗರದಾದ್ಯಂತ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ನಗರದ ಪ್ರಮುಖ ವೃತ್ತಗಳಲ್ಲಿ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಗಳಿಂದಾಗಿ ವಾಹನ ಸವಾರರು ಪ್ರತಿದಿನ ಪರದಾಡುವಂತಾಗಿದೆ. ಪಾಲಿಕೆಯಲ್ಲಿ ಇಂಜಿನಿಯರ್‌ಗಳು ಹಾಗೂ ತಾಂತ್ರಿಕ ಅಧಿಕಾರಿಗಳ ಕೊರತೆಯಿಂದ ಅನೇಕ ಯೋಜನೆಗಳನ್ನು ಮೂಲೆಗುಂಪು ಮಾಡಲಾಗಿದೆ. ಮಳೆಗಾಲದಲ್ಲಿಯೇ ನಗರದಲ್ಲಿ ಹದಿನೈದು ದಿನಕ್ಕೊಮ್ಮೆ ಕುಡಿವ ನೀರು ಸರಬರಾಜುಗೊಳ್ಳಲಿದೆ. ಅದರಂತೆ, ಮುಂದಿನ ಕೆಲವು ತಿಂಗಳಲ್ಲಿ ಬೇಸಿಗೆ ಆರಂಭವಾಗಲಿದ್ದು, ಕುಡಿವ ನೀರಿನ ಸಮಸ್ಯೆ ತಲೆದೂರುವ ಸಾಧ್ಯತೆಯಿದೆ. ತುಂಗಭದ್ರ ಜಲಾಶಯದಿಂದ ಕಾಲುವೆಗಳಿಗೆ ನೀರು ಸ್ಥಗಿತಗೊಳಿಸಿದ್ದು ಕುಡಿವ ನೀರಿನ ಸಮಸ್ಯೆ ದಟ್ಟವಾಗಲಿದೆ. ನಗರದ ಬಹುತೇಕ ಆರ್‌ಒ ಪ್ಲಾಂಟ್‌ಗಳು ದುರಸ್ತಿಗೆ ಕಾದಿವೆ. ಅವುಗಳ ಗಮನ ಹರಿಸಬೇಕಿದ್ದ ಸದಸ್ಯರು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗೆ ಸೀಮಿತವಾಗಿವೆ.ಪಾಲಿಕೆಯ ಸದಸ್ಯರು ತಮ್ಮ ವೈಯಕ್ತಿಕ ಪ್ರತಿಷ್ಠೆ ಹಾಗೂ ರಾಜಕೀಯ ಲಾಭ-ನಷ್ಟಗಳನ್ನು ಬದಿಗಿಟ್ಟು, ನಗರದ ಜನರ ಹಿತದೃಷ್ಟಿಯಿಂದ ಬಜೆಟ್ ಮಂಡನೆಗೆ ಸಹಕರಿಸಬೇಕಿದೆ. ಆಡಳಿತ ಯಂತ್ರ ಚುರುಕುಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾಗರಿಕರ ಆಕ್ರೋಶಗೊಳ್ಳಲಿದ್ದಾರೆ.
ಕೋಟ್....ಜಿಲ್ಲೆಯ ಇಬ್ಬರ ಶಾಸಕರ ನೇತೃತ್ವದಲ್ಲಿ ಫೆ.19ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ನಗರದ ಅಭಿವೃದ್ಧಿ ವಿಷಯದಲ್ಲಿ ಸದಸ್ಯರ ಬೇಡಿಕೆಗಳ ಅನುಗುಣವಾಗಿ ಅನುದಾನ ನೀಡಲಾಗುವುದು. ಬಜೆಟ್‌ನಲ್ಲಿ ನಗರದ ಜಲ್ವಂತ ಸಮಸ್ಯೆಗಳಿಗೆ ಅದ್ಯತೆ ವಹಿಸಲಾಗುವುದು.
- ಪಿ.ಗಾದೆಪ್ಪ, ಮೇಯರ್, ಮಹಾನಗರ ಪಾಲಿಕೆ, ಬಳ್ಳಾರಿ.