ಬಳ್ಳಾರಿಯ ಎಸ್‌ಎಸ್‌ಎ ಕಾಲೇಜಿನಲ್ಲಿ ಆಯೋಜಿಸಿದ್ದ ನವ ಮಾಧ್ಯಮಗಳು ಮತ್ತು ಹೊಸ ತಲೆಮಾರು ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಿರಿಯ ಲೇಖಕ ಜಿ.ಪಿ.ಬಸವರಾಜ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಪ್ರಹ್ಲಾದ್ ಚೌದ್ರಿ, ಪ್ರಾಧ್ಯಾಪಕರಾದ ಡಾ.ದಸ್ತಗೀರಸಾಬ್ ದಿನ್ನಿ, ಕೆ.ಬಸವರಾಜ, ಹುಚ್ಚೂಸಾಬ್ , ಲೇಖಕರಾದ ವೀರೇಂದ್ರ ರಾವಿಹಾಳು, ಡಾ. ನಾಗರಾಜ ಬಸರಕೋಡು ಇತರರಿದ್ದರು. 
ಬಳ್ಳಾರಿ

ಮಾಧ್ಯಮಗಳಿಗೆ ಪ್ರಾಮಾಣಿಕ ಅಗತ್ಯ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಪ್ರಾಮಾಣಿಕ
  • ಮಾಧ್ಯಮ

* ಲೇಖಕ ಜಿ.ಪಿ.ಬಸವರಾಜ ಹೇಳಿಕೆ

ಬಳ್ಳಾರಿ : ನವ ಮಾಧ್ಯಮಗಳು ಸತ್ಯ, ಪ್ರಾಮಾಣಿಕತೆಯ ಕಡೆ ಗಮನ ಹರಿಸಬೇಕು. ದಿಟ್ಟತನ ಮತ್ತು ಸಾಮಾಜಿಕ ಕಳಕಳಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹಿರಿಯ ಲೇಖಕ ಜಿ.ಪಿ.ಬಸವರಾಜ ಹೇಳಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಸಂಗಂ ಟ್ರಸ್ಟ್ ಹಾಗೂ ಕನ್ನಡ ಸ್ನಾತಕ ಮತ್ತು ರಾಜ್ಯಶಾಸ್ತ್ರ ಸ್ನಾತಕೋತ್ತರ ಅಂತರ ವಿಭಾಗೀಯ ಸಹಯೋಗದೊಂದಿಗೆ ಆಯೋಜಿಸಿದ್ದ ನವ ಮಾಧ್ಯಮಗಳು ಮತ್ತು ಹೊಸ ತಲೆಮಾರು ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಧ್ಯಮಗಳಲ್ಲಿ ಹಿರಿಯ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುವಾಗ ಅವರ ಬಗೆಗೆ ಸಂಪೂರ್ಣ ಹೊಂದಿರಬೇಕಲ್ಲದೆ ಸೌಜನ್ಯ, ಗೌರವಗಳೊಂದಿಗಿನ ನಡೆ ಬಹಳ ಮುಖ್ಯ. ಜೋರು ಮಾತನಾಡುವ, ಅಹಂಕಾರ ಪ್ರದರ್ಶಿಸುವ, ಹೆದರಿಸಿ ಕೇಳುವ ಬಗೆ ಉಚಿತವಾದುದಲ್ಲ ಎಂದರು.
ಹೊಸ ತಂತ್ರಜ್ಞಾನ ಮೊದಲಿಗೆ ಎದುರಿಸುತ್ತೆ. ಆಸಕ್ತಿ ಪ್ರಯತ್ನ, ಪರಿಣತಿಗಳಿಂದ ನಿಧಾನಕ್ಕೆ ನಮ್ಮದಾಗಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯು ನಮ್ಮ ಬದುಕನ್ನು ವೇಗವಾಗಿ ಪ್ರವೇಶಿಸುತ್ತಿದೆ. ಅದು ಯಂತ್ರವಷ್ಟೇ. ಮನುಷ್ಯನಿಗಿರುವ ಭಾಷೆಯ ಸೊಗಡು, ಸಂವೇದನೆ, ಚಿಂತನೆ, ಜನರ ಉಸಿರಿನ ಏಳಿತ ಅರ್ಥ ಮಾಡಿಕೊಳ್ಳುವ ಶಕ್ತಿ, ಹೃದಯ ಅದಕ್ಕಿರುವುದಿಲ್ಲ ಎಂದು ವಿಶ್ಲೇಷಿಸಿದರು.
ಹೊಸ ತಲೆಮಾರು ಕೀಳರಿಮೆ, ಸಂಕೋಚ, ಭಯಗಳಿಂದ ಮೈ ಕೊಡವಿ ಎದ್ದಾಗ ಸಮಾಜ ಎದುರಿಸಲು ಸಾಧ್ಯ. ಎಲ್ಲವನ್ನು ಮೀರಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳುವುದು ಇಂದಿನ ಕಾಲದ ಜರೂರು ಎಂದು ಕಿವಿಮಾತು ಹೇಳಿದರು.
ಹೊಸದನ್ನು ಕಲಿಯುತ್ತ, ಕೌಶಲಗಳನ್ನು ರೂಢಿಸಿಕೊಂಡು, ಜ್ಞಾನದ ಬಾಗಿಲನ್ನು ತಟ್ಟುತ್ತ, ಕಣ್ಣಿನಲ್ಲಿ ಬೆಳಕು, ಅನುಭವ ಶ್ರೀಮಂತಿಕೆ, ಆತ್ಮವಿಶ್ವಾಸದಿಂದ ಭಾರತ ಮುಂದುವರಿಸುವುದರೆಡೆ ದಾಪುಗಾಲು ಇಡಬೇಕು ಎಂದು ಆಶಿಸಿದರು.
ಲೇಖಕ ಡಾ.ಶಿವಲಿಂಗಪ್ಪ ಹಂದಿಹಾಳು ಮಾತನಾಡಿ, ಯುವ ಸಮುದಾಯ ಬದುಕಿನ ಒತ್ತಡ, ತಲ್ಲಣ, ತಳಮಳಗಳನ್ನು ಅಕ್ಷರರೂಪಕ್ಕೆ ಇಳಿಸಲು ಮುಂದಾಗಬೇಕು. ಓದು, ಬರವಣಿಗೆಯ ಬಗೆಗೆ ಆಸಕ್ತಿ ವಹಿಸಿ ಬದುಕನ್ನು ಶ್ರೀಮಂತವಾಗಿಸಿಕೊಳ್ಳಬೇಕು ಎಂದರು.
ಸಂಗಮ ಟ್ರಸ್ಟ್ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ ಮಾತನಾಡಿ, ಹೊಸ ತಲೆಮಾರಿಗೆ ಸಾಹಿತ್ಯ ಸಂಸ್ಕೃತಿ ಬಗೆಗೆ ಅಭಿರುಚಿ ಮೂಡಿಸುತ್ತಲೇ ಹೊಸ ವಿಚಾರಗಳನ್ನು ದಾಟಿಸುವ ಆಲೋಚನೆ ನಮ್ಮ ಟ್ರಸ್ಟಿಗೆ ಇದೆ. ವಿದ್ಯಾರ್ಥಿಗಳು ಸೃಜನಶೀಲ ಪುಸ್ತಕಗಳನ್ನು ಓದುವ, ಸಮಾಜಮುಖಿಯಾದ ಹೊಸ ಆಲೋಚನೆಗೆ ತೊಡಗಿ, ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.