ಬಳ್ಳಾರಿ: ನಗರದಲ್ಲಿ ಸ್ವಂತ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳಿಗೆ ವಸತಿ ಕಲ್ಪಿಸುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಹೇಳಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಬಿಸಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಲ್ಲಿ ವಸತಿ ನಿರ್ಮಾಣಕ್ಕೆ ಕಂತಿನ ರೂಪದಲ್ಲಿ ಹಣ ಬಿಡುಗಡೆ ಮಾಡಲಾಗುವುದು. ನಗರದಲ್ಲಿ ಲಾರಿಗಳ ಸಂಚಾರ ಹೆಚ್ಚಾಗಿದ್ದು, ಒಂದೇ ವಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೃಹತ್ ವಾಹನಗಳ ಸಂಚಾರಕ್ಕೆ ಶೀಘ್ರ ಕಡಿವಾಣ ಬೀಳಲಿದೆ. ಇತ್ತೀಚೆಗೆ ಎಸ್ಪಿ ನೇತೃತ್ವದಲ್ಲಿ ಸಭೆ ನಡೆದಿದ್ದು, ರಾತ್ರಿ 11ರಿಂದ ಬೆಳಗ್ಗೆ 6 ಗಂಟೆವರೆಗೆ ಮಾತ್ರ ಬೃಹತ್ ಲಾರಿಗಳ ಸಂಚಾರಕ್ಕೆ ಅವಕಾಶ ನೀಡುವಂತೆ ನಿರ್ಧರಿಸಿದ್ದು, ಕೆಲ ದಿನಗಳಲ್ಲೇ ಡಿಸಿ ಆದೇಶ ಹೊರಡಿಸಲಿದ್ದಾರೆ ಎಂದರು.
‘ಬಿ-ಖಾತಾ’ ಸೇರಿದಂತೆ ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿದ್ದು, ಸಕಾಲದಲ್ಲಿ ಸೇವೆಗಳು ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ನಗರದ ಜೀನ್ಸ್ ಘಟಕಗಳಿಗೆ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಸಿಎಸ್ಆರ್ ನಿಧಿಯನ್ನು ನಿಯಮಾವಳಿ ಪ್ರಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಮಾತ್ರ ಬಳಸಲು ಅವಕಾಶವಿದ್ದು, ಈ ಕುರಿತು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು. ವಿದ್ಯಾನಗರ ವೃತ್ತಕ್ಕೆ ಎ.ಸಿ.ವೆಂಕಟಸ್ವಾಮಿ ಹೆಸರು ನಾಮಕರಣ ಕುರಿತು ಬಿಜೆಪಿಯ ಪಾಲಿಕೆ ಸದಸ್ಯ ಸಿ.ಎಂ.ಇಬ್ರಾಹಿಂ ಬಾಬು ಆಕ್ಷೇಪ ವ್ಯಕ್ತಪಡಿಸಿ, ಅವರ ಹಿನ್ನೆಲೆ, ಕೊಡುಗೆ ವಿವರ ಬಹಿರಂಗಪಡಿಸಲು ಆಗ್ರಹಿಸಿದರು.
ಪಾಲಿಕೆ ಸದಸ್ಯೆ ರಾಜೇಶ್ವರಿ ಸುಬ್ಬರಾಯಡು ಅವರು ಸೂಕ್ತ ವಿವರಗಳನ್ನು ಶೀಘ್ರ ಒದಗಿಸುವುದಾಗಿ ತಿಳಿಸಿದರು. ನಗರದ ಬಹುತೇಕ ರಸ್ತೆಗಳು ಗುಂಡಿಬಿದ್ದಿದ್ದು, ಒಳಚರಂಡಿ ವ್ಯವಸ್ಥಿತವಾಗಿಲ್ಲ ಎಂದು ನಿವಾಸಿಗಳು ಪಾಲಿಕೆ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ತಿಳಿಸಿದರು.
ಸಭೆಗೆ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದು, ನೋಟಿಸ್ ನೀಡುವಂತೆ ಆಗ್ರಹಿಸಿದರು. ಬೆಳಗ್ಗೆ 11ಕ್ಕೆ ನಡೆಯಬೇಕಿದ್ದ ಸಭೆ 1 ಗಂಟೆ ತಡವಾಗಿ ಆರಂಭಗೊಂಡಿತು. ಶಾಸಕರಾದ ನಾರಾ ಭರತ್ರೆಡ್ಡಿ, ಬಿ.ನಾಗೇಂದ್ರ, ಎಂಎಲ್ಸಿ ವೈ.ಎಂ. ಸತೀಶ್ ಗೈರಾಗಿದ್ದರು. ಪಾಲಿಕೆ ಸದಸ್ಯರಾದ ಎಂ.ಪ್ರಭಂಜನ್, ಶ್ರೀನಿವಾಸ್ ಮೋತ್ಕರ್, ಮಿಂಚು ಶ್ರೀನಿವಾಸ, ಕುಬೇರ ಇತರರಿದ್ದರು.