ಕಂಪ್ಲಿಯಲ್ಲಿ ಲೇಖಕ ಬಂಗಿ ದೊಡ್ಡ ಮಂಜುನಾಥ ಅವರ ‘ಬೆಂಕಿಯ ಶೀತ’ ಮತ್ತು ‘ಶೀತದ ಕಾವು’ ಜೋಡಿ ಕಾದಂಬರಿಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ, ಪ್ರಮುಖರಾದ ಡಾ.ನಿಷ್ಠಿ ರುದ್ರಪ್ಪ, ಕ.ಮ.ಹೇಮಯ್ಯಸ್ವಾಮಿ ಎನ್.ವೀರಭದ್ರಗೌಡ, ಡಾ.ಮುಮ್ತಾಜ್ ಬೇಗಂ, ಡಿ.ವೀರಪ್ಪ ಇತರರಿದ್ದರು.
- ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ ಅಭಿಮತ
- ಕಂಪ್ಲಿ ಕಾದಂಬರಿಗಳ ಬಿಡುಗಡೆ
ಕಂಪ್ಲಿ: ಜನಮಾನಸದಲ್ಲಿ ಉಳಿವ ಕೃತಿಗಳು ಮಾತ್ರ ಬದುಕಿ ಬಾಳುತ್ತವೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ ಹೇಳಿದರು.
ಪಟ್ಟಣದ ಶ್ರೀ ಪೇಟೆ ಬಸವೇಶ್ವರ ಸಭಾಂಗಣದಲ್ಲಿ ಕಸಾಪ ತಾಲೂಕು ಘಟಕದಿಂದ ಆಯೋಜಿಸಿದ್ದ ಲೇಖಕ ಬಂಗಿ ದೊಡ್ಡ ಮಂಜುನಾಥ ಅವರ ‘ಬೆಂಕಿಯ ಶೀತ’ ಮತ್ತು ‘ಶೀತದ ಕಾವು’ ಜೋಡಿ ಕಾದಂಬರಿಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೇವನೂರು ಮಹಾದೇವ ಮತ್ತು ಡಾ.ರಾಜಶೇಖರ ನೀರಮಾನ್ವಿ ಅವರ ಕೃತಿಗಳು ಜನಮಾನಸದಲ್ಲಿವೆ ಎಂದರು.
ಜಿಲ್ಲೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ಗೊಂದಲವಿದ್ದು, ಜಿಲ್ಲಾಧ್ಯಕ್ಷರು ಈ ಕುರಿತು ಕಾಳಜಿ ತೋರಬೇಕು. ರಾಜ್ಯದಲ್ಲಿ ಎಲ್ಲ ಹಂತದ ಶಿಕ್ಷಣದಲ್ಲೂ ಕನ್ನಡ ಪತ್ರಿಕೆಗಳನ್ನು ಓದುವುದು ಕಡ್ಡಾಯವಾಗುವ ನಿಯಮ ಜಾರಿಗೆ ತರಬೇಕು. ಎಲ್ಲ ಪತ್ರಕರ್ತರಿಗೆ ವೇತನ ನೀಡುವ ಪದ್ಧತಿ ಜಾರಿಯಾದಾಗ ಅವರ ಬದುಕು ಹಸನಾಗಲು ಸಾಧ್ಯ ಎಂದು ಹೇಳಿದರು.
ಗಂಗಾವತಿಯ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಜೋಡಿ ಕಾದಂಬರಿಗಳನ್ನು ವಿಮರ್ಶಿಸಿ, ವ್ಯಕ್ತಿ ಮತ್ತು ಸಮಾಜದ ಸಂಘರ್ಷಗಳು, ಶೋಷಣೆ, ಮತ್ಸರ, ತಾತ್ವಿಕ ಸಂಘರ್ಷಗಳು ಕಾದಂಬರಿಯ ವಸ್ತುಗಳಾಗಿವೆ. ಕಾದಂಬರಿಯಲ್ಲಿ ಸ್ತ್ರೀ ಪಾತ್ರಗಳಲ್ಲಿ ಸಮಸ್ಯೆಗಳನ್ನು ಎದುರಿಸುವ ವರ್ತಮಾನದ ಹೋರಾಟವಿದೆ. ಹೆಣ್ಣಿನ ಸ್ವಾಯತ್ತಿನ ಪ್ರಶ್ನೆ ಎತ್ತಿ ಚಿಂತನೆ ಮೂಡಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕೆನ್ನುವುದು ಜನತೆಯ 69 ವರ್ಷಗಳ ಕನಸಾಗಿದೆ. ಕೋರ್ಟ್-ಕಚೇರಿಗಳ ತಾಂತ್ರಿಕ ತೊಂದರೆಗಳಿಂದ ಸಮ್ಮೇಳನ ತಡವಾಗುತ್ತಿದೆ. ಸಮ್ಮೇಳನ ನಡೆಸಲು ನಿರಂತರ ಪ್ರಯತ್ನ ನಡೆಸಲಾಗಿದೆ ಎಂದರು.
ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಜೋಡಿ ಕಾದಂಬರಿಗಳನ್ನು ಬಿಡುಗಡೆಗೊಳಿಸಿದರು. ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ವೀರಪ್ಪ, ನಗರಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣ ಎಸ್.ಪೋಳ್, ಪಿರಮಿಡ್ ಮಾಸ್ಟರ್ ಕೋನೇರು ಶ್ರೀರಾಮಕೃಷ್ಣ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಲೇಖಕ ಬಂಗಿ ದೊಡ್ಡ ಮಂಜುನಾಥ, ಕಸಾಪ ಪದಾಧಿಕಾರಿಗಳು ಇದ್ದರು.