ಸಿರಗುಪ್ಪ ಪ್ಯಾಟೆ ಆಂಜನೇಯ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ಅರ್ಚಕರ ಸಂಘದ (ಮುಜರಾಯಿ ಇಲಾಖೆ) ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಸಿ.ರಂಗರಾಜನ್ ಅವರನ್ನು ಸನ್ಮಾನಿಸಲಾಯಿತು. 
ಬಳ್ಳಾರಿ

ವಂಶಪಾರಂಪರ್ಯ ಪೂಜೆ ಅಧಿಕಾರ ನೀಡಲಿ

ಸಿರಗುಪ್ಪ: ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ದೇವಾಲಯಗಳ ಅರ್ಚಕರ ಸಮಸ್ಯೆಗಳಿಗೆ ಸಂಘ ಸ್ಪಂದಿಸಲಿದೆ ಎಂದು ಕರ್ನಾಟಕ ರಾಜ್ಯ ಅರ್ಚಕರ ಸಂಘದ (ಮುಜರಾಯಿ ಇಲಾಖೆ) ಅಧ್ಯಕ್ಷ ಸಿ.ರಂಗರಾಜನ್ ಹೇಳಿದರು.
ಪಟ್ಟಣದ ಪ್ಯಾಟೆ ಆಂಜನೇಯ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ಅರ್ಚಕರ ಸಂಘದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು. ದೇವಾಲಯಗಳು ಭಾರತ ದೇಶದ ಇತಿಹಾಸದ ಹೆಗ್ಗುರುತುಗಳಾಗಿವೆ. ಹಳ್ಳಿಗಳಲ್ಲಿರುವ ಹಿಂದೂ ದೇವಾಲಯಗಳ ಅರ್ಚಕರಿಗೆ ಯಾವುದೇ ದಕ್ಷಿಣೆ ಇರುವುದಿಲ್ಲ. ದೇವರನ್ನೇ ನಂಬಿ ಬದುಕುವ ಅರ್ಚಕರ ಸಮಸ್ಯೆಗಳಿಗೆ ರಾಜ್ಯ ಅರ್ಚಕರ ಸಂಘ ಸ್ಪಂದಿಸಲಿದೆ ಎಂದರು.
ಪಾಳು ಬಿದ್ದ ದೇವಾಲಯಗಳ ಪುನರುತ್ಥಾನ ಮತ್ತು ಅರ್ಚಕರಿಗೆ ವಾಸಿಸಲು ದೇವಾಲಯದ ಹತ್ತಿರ ಮನೆ ನಿರ್ಮಾಣ, ಅರ್ಚಕರಿಗೆ ನೀಡುವ ತಸ್ತೀಕ ಮೊತ್ತವನ್ನು ಪ್ರತಿ ವರ್ಷ ನವೀಕರಿಸದೆ ಶಾಶ್ವತವಾಗಿ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ವಂಶಪಾರಂಪರ್ಯವಾಗಿ ಅರ್ಚಕರಿಗೆ ಗುಡಿ ಪೂಜೆ ಮಾಡುವ ಅಧಿಕಾರ, ಅರ್ಚಕರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಶಿಷ್ಯವೇತನ ನೀಡುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಸಂಘದ ತಾಲೂಕು ಅಧ್ಯಕ್ಷ ಕಾಳಪ್ಪ ಆಚಾರಿ, ಕಾರ್ಯದರ್ಶಿ ವೀರೇಶಯ್ಯ ಸ್ವಾಮಿ, ಹಿರಿಯ ಅರ್ಚಕ ಹಚೋಳ್ಳಿ ಪ್ರಭುಸ್ವಾಮಿ, ಹಾಸ್ಯ ಕಲಾವಿದ ಜೆ. ನರಸಿಂಹಮೂರ್ತಿ ಭಾಗವಹಿಸಿದ್ದರು.