ಸಿರಗುಪ್ಪದಲ್ಲಿ ಚೈತನ್ಯ ಯುವಶಕ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಬಸವ ಭೂಷಣ ಸ್ವಾಮೀಜಿ ಉದ್ಘಾಟಿಸಿದರು. 
ಬಳ್ಳಾರಿ

ವಿದ್ಯಾರ್ಥಿ ಜೀವನ ಆದರ್ಶವಾಗಿರಲಿ

ಅಶೋಕ್ ಕುಮಾರ್ ಎನ್
ಸಿರಗುಪ್ಪ: ಆರೋಗ್ಯವಂತ ಸಮಾಜಕ್ಕೆ ವೈದ್ಯರು, ಜಾಗೃತ ಸಮಾಜಕ್ಕೆ ಪತ್ರಕರ್ತರು ಅಗತ್ಯವಾಗಿದ್ದು, ವೈದ್ಯರ ಹಾಗೂ ಪತ್ರಿಕಾ ದಿನವನ್ನು ಒಂದೇ ವೇದಿಕೆಯಲ್ಲಿ ಆಚರಿಸುವುದು ಹೆಮ್ಮೆಯ ಸಂಗತಿ ಎಂದು ಗುರುಬಸವ ಮಠದ ಮಠಾಧಿಪತಿ ಬಸವಭೂಷಣ ಸ್ವಾಮೀಜಿ ಹೇಳಿದರು.
ಪಟ್ಟಣದ ಎಸ್.ಇ.ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಚೈತನ್ಯ ಯುವಶಕ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ವಿದ್ಯಾರ್ಥಿಗಳ ಜೀವನ ಆದರ್ಶಮಯವಾಗಿದ್ದರೆ ಮಾತ್ರ ದೇಶವನ್ನು ಮುನ್ನಡೆಸಲು ಸಾಧ್ಯ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಡಾ.ಮಧುಸೂದನ್ ಕಾರಿಗನೂರು ಮಾತನಾಡಿ, ವೈದ್ಯರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ರೋಗಿಗಳು ಸಹ ವೈದ್ಯರಿಗೆ ಗೌರವ ಪೂರ್ವಕವಾಗಿ ಸಹಕರಿಸಿದಲ್ಲಿ ಉತ್ತಮ ಚಿಕಿತ್ಸೆ ನೀಡಲು ಸಾಧ್ಯ. ವೈದ್ಯರು ಮತ್ತು ಪತ್ರಿಕೆಗಳು ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದಾಗ ಆದರ್ಶ ಸಮಾಜ ನಿರ್ಮಿಸಲು ಸಾಧ್ಯ. ಪತ್ರಿಕೆಗಳು ಜ್ಞಾನಾರ್ಜನೆಯೊಂದಿಗೆ ಹೊಸ ಬರಹಗಾರರಿಗೆ ಪ್ರೇರೇಪಣೆ ನೀಡಿ ನೂತನ ಚಿಂತನೆಗಳ ಉಗಮಕ್ಕೆ ಕಾರಣವಾಗುತ್ತವೆ ಎಂದರು.
ವಿದ್ಯಾರ್ಥಿಗಳು ಮೊಬೈಲ್, ಟಿವಿ, ಧೂಮಪಾನ, ಮಧ್ಯಪಾನ ಇತ್ಯಾದಿಗಳಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಉನ್ನತ ಸಾಧನೆಯ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ಸ್ತ್ರೀರೋಗ ತಜ್ಞೆ ಡಾ.ಕೆ.ಗಂಗಮ್ಮ ಹೇಳಿದರು.
ಡಾ.ಅರವಿಂದ ಪಾಟೀಲ್, ತಾಲೂಕು ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಜಲೀಲ್, ತಾಲೂಕು ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ, ಮುಖ್ಯ ಲೆಕ್ಕಪರಿಶೋಧಕ ಕೆ.ನಾಗನಗೌಡ, ಪತ್ರಕರ್ತ ಸಿ.ಮಂಜುನಾಥ, ಸರ್ಕಾರಿ ನೌಕರ ಸಂಘದ ತಾಲೂಕು ಗೌರವಾಧ್ಯಕ್ಷ ಕೆ.ವೆಂಕಟೇಶ್, ಕಾರ್ಯದರ್ಶಿ ಡಾ.ಕೆ.ಎಂ.ಚಂದ್ರಕಾಂತ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾರೆಪ್ಪ ನಾಯಕ, ಚೈತನ್ಯ ಯುವಶಕ್ತಿ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ರಮೇಶ ಉಪ್ಪಾರ ಇತರರಿದ್ದರು.