ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಪುಸ್ತಕ ಪ್ರಕಾಶನ ಕಮ್ಮಟ’ದ ಸಮಾರೋಪ ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ. ಎಂ.ಮುನಿರಾಜು ಅವರು, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅವರಿಗೆ ಪುಸ್ತಕ ನೀಡಿ ಗೌರವಿಸಿದರು. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಕಾರ್ಯದರ್ಶಿ ಕೆ.ರವಿಕುಮಾರ, ಪ್ರೊ.ತಿಪ್ಪೇರುದ್ರ ಇದ್ದರು.
ಬಳ್ಳಾರಿ : ಜನರಿಗೆ ವಿದ್ಯಾವಂತಿಕೆ ಸಿಕ್ಕರೆ ಮಾತ್ರ ಸಾಲದು, ಒಳ್ಳೆಯ ಸಾಹಿತ್ಯ ಅವರ ಕೈಗೆ ಸೇರದೆ ಹೋದರೆ, ಸಾಂಸ್ಕೃತಿಕ ಹರಾಜಕತೆ ಉಂಟಾಗುತ್ತದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥ ವೆಂಕಟಗಿರಿ ದಳವಾಯಿ ಹೇಳಿದರು.
ನಗರದ ವಿಎಸ್‌ಕೆ ವಿವಿಯಲ್ಲಿ ಬೆಂಗಳೂರಿನ ಕರ್ನಾಟಕ ಪ್ರಕಾಶಕರ ಸಂಘ ಜಂಟಿಯಾಗಿ ಆಯೋಜಿಸಿದ್ದ ಪುಸ್ತಕ ಪ್ರಕಾಶನ ಕಮ್ಮಟ’ದ ಸಮಾರೋಪ ಕಾರ್ಯಕ್ರಮದ ಐದನೇ ಗೋಷ್ಠಿಯಲ್ಲಿ ಪುಸ್ತಕ ಸಂಸ್ಕೃತಿ ಪ್ರಸಾರ ಮತ್ತು ಪ್ರಸಾರಾಂಗ’ ಕುರಿತು ವಿಷಯದಲ್ಲಿ ಮಾತನಾಡಿದರು. ಸಾಂಸ್ಕೃತಿಕ ರಾಕ್ಷಸತ್ವ ವಿಜೃಂಬಿಸಲಿದೆ. ವಿದ್ಯಾವಂತರಿಗೆ ಒಳ್ಳೆಯ ಪುಸ್ತಕಗಳು ಸಿಕ್ಕರೆ ಮಾತ್ರ ಇದನ್ನು ತಪ್ಪಿಸಲು ಸಾಧ್ಯ. ಈ ಕೆಲಸವನ್ನು ಪ್ರಸಾರಂಗಗಳು, ಪ್ರಕಾಶನಗಳು ಮಾಡಬೇಕು ಎಂದರು.
ಪುಸ್ತಕ ಸಂಸ್ಕೃತಿಯೇ ಒಂದು ಧರ್ಮ ಎಂದು ಪರಿಭಾವಿಸುವ ಕಾಲ ಇತ್ತು. ಭಾರತದಲ್ಲಿ ಪುಸ್ತಕಗಳೆಂದರೆ ಜ್ಞಾನ, ಸಹಿಷ್ಣುತೆಯ ಪ್ರತೀಕ, ಭಾರತದಲ್ಲಿ ಸಾಮ್ರಾಜ್ಯಗಳ ಮೇಲೆ ಮಾತ್ರ ದಾಳಿ ನಡೆಯಲಿಲ್ಲ. ಬದಲಿಗೆ ಪುಸ್ತಕಗಳ ಚರಿತ್ರೆಯೂ ಮೇಲೆ ದಾಳಿಗಳು ನಡೆದಿವೆ. ಇದು ಚರಿತ್ರೆಯಲ್ಲಿ ದಾಖಲಾಗಿದೆ. ನಳಂದ ವಿಶ್ವವಿದ್ಯಾಲಯ ದಾಳಿಗೊಳಗಾದಾಗ ಅಲ್ಲಿನ ಗ್ರಂಥಾಲಯದ ಪುಸ್ತಕಗಳು ನಾಲ್ಕು ದಿನ ನಿರಂತರವಾಗಿ ಬೆಂಕಿಯಲ್ಲಿ ಉರಿದವು. ಅಂದರೆ, ಇಲ್ಲಿನ ಜ್ಞಾನದ ಹರವು ಎಂತಹದು ಎಂಬುದು ಅರಿಯಬಹುದು ಎಂದು ವಿವರಿಸಿದರು.
ಹಂಪಿ ಕನ್ನಡ ವಿವಿಯ ಪ್ರಸಾರಾಂಗ ವಿಭಾಗದ ನಿರ್ದೇಶಕ ಡಾ.ಪಿ.ಮಹಾದೇವಯ್ಯ ಮಾತನಾಡಿ, ಪ್ರಸಾರಾಂಗಗಳ ಪ್ರಗತಿಯಲ್ಲಿ ಕೊರತೆ ಕಾಣುತ್ತಿದೆ. ಇವು ಸಿಬ್ಬಂದಿಗೆ ಸೀಮಿತ ಎಂಬಂತಾಗಿದ್ದು, ಜನತೆಗಾಗಿ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು.