ಹರಪನಹಳ್ಳಿ ತಾಲೂಕಿನ ಕಂಚಿಕೆರೆ ಗ್ರಾಮದಲ್ಲಿ ಗಣಪತಿ, ಸುಬ್ರಹ್ಮಣ್ಯ, ಹೇಮರಡ್ಡಿ ಮಲ್ಲಮ್ಮ ಹಾಗೂ ನವಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿದರು. ರಾಜಸ್ವ ನಿರೀಕ್ಷಕ ಶಿವಕುಮಾರ್ ಹಿರೇಗೌಡರ್, ಕರಿಬಸಪ್ಪ, ದಿಶಾ ಕಮಿಟಿ ಸದಸ್ಯ ರೆಡ್ಡಿ ಶಾಂತ ಕುಮಾರ್, ಕುಮಾರ್ ಇತರರಿದ್ದರು.
ಹರಪನಹಳ್ಳಿ: ಗುರು, ದೈವ ಪರಂಪರೆ ಹೊಂದಿರುವ ಭಾರತೀಯರಲ್ಲಿ ಅಪಾರವಾದ ಅರ್ಪಣಾಭಾವ ಇದೆ. ಇದರಿಂದಾಗಿ ಅಪರಾಧ ಕೃತ್ಯಗಳು ನಿಯಂತ್ರಣದಲ್ಲಿವೆ ಎಂದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಕಂಚಿಕೆರೆ ಗ್ರಾಮದಲ್ಲಿ ಗಣಪತಿ, ಸುಬ್ರಹ್ಮಣ್ಯ, ಹೇಮರಡ್ಡಿ ಮಲ್ಲಮ್ಮ ಹಾಗೂ ನವಗ್ರಹ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶುಕ್ರವಾರ ಆಶೀರ್ವಚನ ನೀಡಿದರು. ತಾರತಮ್ಯ ಅಳಿದು ನಾಡು ಸಮೃದ್ಧವಾಗಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು. ಧರ್ಮ ನಿಷ್ಠ ಮಕ್ಕಳು ಜನಿಸುವಂತಾಗಬೇಕು ಎಂದರು.
ಪಾಶ್ಚಾತ್ಯ ದೇಶದಲ್ಲಿ ದೇವರಿಗಿಂತ ದೇಹ ಪೂಜೆ ಹೆಚ್ಚಿದೆ, ದೇಹಕ್ಕಿಂತ ದೇವರನ್ನು ಪೂಜಿಸಿಸುವ ಏಕೈಕ ದೇಶ ಭಾರತ. ಪರಕೀಯರು ನೂರಾರು ವರ್ಷ ದೇಶ ಕೊಳ್ಳೆ ಹೊಡೆದರೂ ಭಾರತ ಅಭಿವೃದ್ಧಿಯತ್ತ ಸಾಗುತ್ತಿರುವುದರ ಹಿಂದೆ ಧರ್ಮ, ದೇವರ ಆಶೀರ್ವಾದ ಇದೆ ಎಂದು ತಿಳಿಸಿದರು.
ಅವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಧರ್ಮ ಸಹಿಷ್ಣುತೆ ಬೆಳೆಸಿಕೊಂಡಾಗ ಗ್ರಾಮ, ಕ್ಷೇತ್ರ ಅಭಿವೃದ್ಧಿ ಹೊಂದಲಿದೆ. ದುರ್ಗಮಹಾದಿಯಲ್ಲಿದ್ದ ಕಂಚಿಕೆರೆ ರೇವಣಸಿದ್ದೇಶ್ವರ ಮಠದ ಅಭಿವೃದ್ಧಿಗೆ ದೈವತ್ವ ಕಾರಣವಾಗಿದೆ. ದೇವರು ಹಾಗೂ ಹೇಮರಡ್ಡಿ ಮಲ್ಲಮ್ಮನ ಕೃಪೆಯಿಂದ ಸಮಾಜ ಅಭಿವೃದ್ಧಿ ಪಥದತ್ತ ಸಾಗಿದೆ. ಮಲ್ಲಮ್ಮ ಅವರ ಆದರ್ಶ ಚಿಂತನೆಗಳೊಂದಿಗೆ ಶಿಕ್ಷಣ, ಆರೋಗ್ಯ, ಸಾಮಾಜಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕ ಜಿ.ಎಸ್ ಪಾಟೀಲ್ ಮಾತನಾಡಿ, ದಾವಣಗೆರೆಯಲ್ಲಿ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ನಿರ್ಮಾಣಕ್ಕೆ ಹಣಕಾಸಿನ ಸಹಾಯ ಮಾಡುವುದಾಗಿ ತಿಳಿಸಿದರು. ಹೇಮರಡ್ಡಿ ಮಲ್ಲಮ್ಮ ಸಮಾಜದ ಮಹಿಳಾ ಘಟಕದ ಆಧ್ಯಕ್ಷೆ ಕುಸುಮ ಲೋಕೇಶ್, ನಾಗರಾಜ, ಶಿಲ್ಪಿ ಕೆ.ನಾಗರಾಜ ಇತರರಿದ್ದರು.