ಬಳ್ಳಾರಿ : ಅಂಗನವಾಡಿ ಸಹಾಯಕ ಕಾರ್ಯಕರ್ತೆಯರೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಮಾ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ರಾಜ್ಯಾಧ್ಯಕ್ಷ ಬಿ.ಅಮ್ಜದ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಂಗನವಾಡಿ ವ್ಯವಸ್ಥೆಯು ಕೇವಲ ಆಟದ ಕೇಂದ್ರವಲ್ಲ. ಗರ್ಭಿಣಿ, ಬಾಣಂತಿಯರು ಮತ್ತು ನವಜಾತ ಶಿಶುವಿನಿಂದ ಆರು ವರ್ಷದ ಮಕ್ಕಳ ಆರೋಗ್ಯದ ಉಸ್ತುವಾರಿ ನೋಡಿಕೊಳ್ಳುವ ಪ್ರಮುಖ ಕೊಂಡಿಯಾಗಿದೆ. ದೇಶದಲ್ಲಿ 28 ಲಕ್ಷ ಹಾಗೂ ರಾಜ್ಯದಲ್ಲಿ 1.38 ಲಕ್ಷ ಕಾರ್ಯಕರ್ತೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ಇವರನ್ನು ಪೂರ್ಣಕಾಲಿಕ ಉದ್ಯೋಗಿಗಳು ಎಂದು ಪರಿಗಣಿಸಬೇಕು ಎಂಬುದಾಗಿ ಹೇಳಿದ್ದರೂ, ಸರ್ಕಾರಗಳು ಮಾತ್ರ ಅರೆಕಾಲಿಕ ನೌಕರರೆಂದು ಪರಿಗಣಿಸಿ ಕನಿಷ್ಠ ವೇತನ ನೀಡದೆ ಶೋಷಣೆ ಮಾಡುತ್ತಿವೆ ಎಂದರು.
ಕೇಂದ್ರ ಬಜೆಟ್‌ಗೂ ಮುನ್ನ ಪ್ರಧಾನಮಂತ್ರಿಯವರಿಗೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು. ಐಸಿಡಿಎಸ್ ಯೋಜನೆಯನ್ನು ಕಾಯಂ ಮಾಡುವಂತೆ ಒತ್ತಾಯಿಸಿದ್ದರೂ, ಇತ್ತೀಚಿನ ಬಜೆಟ್‌ನಲ್ಲಿ ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಆದ್ದರಿಂದ, ಅಂಗನವಾಡಿ ವ್ಯವಸ್ಥೆಯನ್ನು ಸರ್ಕಾರದ ಶಾಶ್ವತ ಅಂಗವಾಗಿ ಪರಿಗಣಿಸಬೇಕು. ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ವೇತನ ಮತ್ತು ಸೌಲಭ್ಯ ನೀಡಬೇಕು. ಅಪೌಷ್ಠಿಕತೆ ಮತ್ತು ರಕ್ತಹೀನತೆ ತಡೆಗಟ್ಟಲು ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಎಂ.ಜಯಮ್ಮ, ಅರ್ಕಾಣಿ, ಮಂಗಮ್ಮ, ಸ್ವರೂಪರಾಣಿ, ಡಾ.ಜನಾರ್ದನ, ಶಿವಕುಮಾರ್, ಅದಿಮೂರ್ತಿ, ಕವಿತಾ ಇದ್ದರು.