ಕೊಟ್ಟೂರು ರಸಗೊಬ್ಬರ ಸಂಗ್ರಹ ಗೋದಾಮಿಗೆ ಸಹಾಯಕ ಕೃಷಿ ನಿರ್ದೇಶಕ ಆರ್.ವಿ.ತೇಜವರ್ಧನ್ ಭೇಟಿ ನೀಡಿ ತಪಾಸಣೆ ನಡೆಸಿದರು. ಸಹಾಯಕ ಕೃಷಿ ಅಧಿಕಾರಿ ಶ್ಯಾಮಸುಂದರ್, ರಸಗೊಬ್ಬರ ಮಳಿಗೆ ಮಾಲೀಕ ನಾಗರಾಜ ಶೆಟ್ಟಿ ಇತರರಿದ್ದರು.
ಕೊಟ್ಟೂರು: ರಸಗೊಬ್ಬರ ವಿತರಣೆಯಲ್ಲಿ ಕೃತಕ ಅಭಾವ ಸೃಷ್ಟಿಸದಂತೆ ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ರಸಗೊಬ್ಬರಗಳ ಅಂಗಡಿ ಮಾಲೀಕರಿಗೆ ಸಹಾಯಕ ಕೃಷಿ ನಿರ್ದೇಶಕ ಆರ್.ವಿ.ತೇಜವರ್ಧನ್ ತಾಕೀತು ಮಾಡಿದರು.
ಪಟ್ಟಣದಲ್ಲಿನ ರಸಗೊಬ್ಬರ ಮಳಿಗೆಗಳಿಗೆ ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ಅಭಾವ ಸೃಷ್ಟಿಸದಂತೆ ಸರಿಯಾಗಿ ರಸಗೊಬ್ಬರ ವಿತರಣೆ ಮಾಡುವಂತೆ ಹಾಗೂ ರೈತರು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಖರೀದಿಸಿದಾಗ ಕಡ್ಡಾಯವಾಗಿ ಬಿಲ್ ಕೊಡಲು ಅಂಗಡಿ ಮಾಲೀಕರಿಗೆ ಸೂಚಿಸಿದರು.
ಪಟ್ಟಣದ ರಸಗೊಬ್ಬರದ ಮಳಿಗೆಗಳಲ್ಲಿ ದಾಸ್ತಾನು ಪರಿಶೀಲಿಸಿ ಯೂರಿಯಾ ಹೊರತು ಪಡಿಸಿ ಡಿಎಪಿ ಸೇರಿದಂತೆ ಇತರೆ ರಸಗೊಬ್ಬರಗಳೆಲ್ಲ 2,500 ಮೆ.ಟನ್ ದಾಸ್ತಾನು ಲಭ್ಯವಿದೆ. ತಪಾಸಣೆ ವೇಳೆ ಗೋದಾಮಿನಲ್ಲಿ ಯಾವುದೇ ಕಳಪೆ ಮಟ್ಟದ ರಸಗೊಬ್ಬರ ಸಂಗ್ರಹ ಕಂಡುಬಂದಿಲ್ಲ. ನ್ಯಾನೋ ಯೂರಿಯಾ, ನ್ಯಾನೋ ಡಿಎಪಿಯನ್ನು ರೈತರು ಬಳಸಬೇಕು. ಇನ್ನು ಮಳೆ ಅಭಾವವಿರುವುದರಿಂದ ರೈತರು ರಸಗೊಬ್ಬರವನ್ನು ವೈಜ್ಞಾನಿಕ ಶಿಫಾರಸಿನಂತೆ ಬಳಸಬೇಕು. ಇಲ್ಲವಾದರೆ ಮೊಳಕೆಯೊಡೆದ ಸಸಿಗಳು ಬಿಸಿಲಿನ ತಾಪಕ್ಕೆ ನಾಶವಾಗುತ್ತವೆ. ಭೂಮಿಯಲ್ಲಿ ಹೆಚ್ಚಿನ ತೇವಾಂಶ ಇದ್ದಾಗ ಮಾತ್ರ ಬಿತ್ತನೆ ಮಾಡಬೇಕು. ಒಣ ಮಣ್ಣಿನಲ್ಲಿ ಬಿತ್ತನೆ ಮಾಡಿದರೆ ಬೀಜಗಳನ್ನು ಇರುವೆ ಹಾಗೂ ಪಕ್ಷಿಗಳು ತಿನ್ನುತ್ತವೆ ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ಶ್ಯಾಮಸುಂದರ್, ರಸಗೊಬ್ಬರ ಮಳಿಗೆಗಳ ಮಾಲೀಕರಾದ ಶ್ರೀಧರ್ ಶೆಟ್ಟಿ, ಕೊಟ್ರೇಶ ಬಿ., ಕೊಟ್ರೇಶ ನಾಯ್ಕ, ಪಂಪಾಪತಿ, ಜಗದೀಶ್, ಪ್ರವೀಣ್ ಕುಮಾರ್, ನಾರಾಯಣ, ಶಿವುಕುಮಾರ ಹಾಗೂ ಇತರರಿದ್ದರು.