ಎಡಿಸಿ ಮಹಮ್ಮದ್ ಎನ್.ಜುಬೇರ್ 
ಬಳ್ಳಾರಿ

ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಆಚರಣೆ
ಬಳ್ಳಾರಿ : ಜಿಲ್ಲಾಡಳಿತದಿಂದ ನಡೆಯುವ ಮಹನೀಯರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಯಂತಿ ಆಚರಣೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಗರದ ಹೊಂಗಿರಣ ಸಭಾಂಗಣದಲ್ಲಿ ಫೆ.1ರಂದು ಮಡಿವಾಳ ಮಾಚಿದೇವ ಹಾಗೂ ಫೆ.10ರಂದು ಕಾಯಕ ಶರಣ ಜಯಂತಿಯ ಕಾರ್ಯಕ್ರಮ ಆಚರಿಸಲಾಗುವುದು. ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.
ಶಿವಶರಣರು ಬಿತ್ತಿದ ಸಾಮಾಜಿಕ ಮೌಲ್ಯಗಳನ್ನು ಶಾಲಾ ಕಾಲೇಜು ಮಕ್ಕಳಿಗೂ ಅರಿವು ಮೂಡಿಸುವ ಅಗತ್ಯವಿದೆ. ಶರಣರು ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾದವರಲ್ಲ. ಅವರ ಜೀವನ, ಚಿಂತನೆ, ದಾರ್ಶನಿಕ ಬದುಕುಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಲು ಸರ್ಕಾರವು ಜಯಂತಿ ಕಾರ್ಯಕ್ರಮ ಆಚರಿಸುತ್ತಿದೆ ಎಂದು ತಿಳಿಸಿದರು.
ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಸೂಚನೆಗಳಿದ್ದು, ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯಲೇ ಬೇಕು. ಬೈಕ್ ರ‌್ಯಾಲಿ, ಡಿಜೆ ಧ್ವನಿವರ್ಧಕ ಬಳಕೆಗೆ ಅವಕಾಶವಿಲ್ಲ. ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಭಕ್ತಿ-ಭಾವದಿಂದ ಮಹನೀಯರ ಜಯಂತಿ ಆಚರಿಸೋಣ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಶಿಷ್ಠಾಚಾರದ=ಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರಿಗೆ, ಸಂಘ-ಸಂಸ್ಥೆಗಳಿಗೆ ವಿತರಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮಹನೀಯರ ಆಚಾರ-ವಿಚಾರಗಳನ್ನು ಪರಿಣಿತರಿಂದ ವಿಶೇಷ ಉಪನ್ಯಾಸ ಮೂಲಕ ತಲುಪಿಸಲು ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಇದ್ದರು.