ಕೂಡ್ಲಿಗಿಯಲ್ಲಿ ಉಪ ನೋಂದಣಿ ಇಲಾಖೆ ಕಚೇರಿ ಮುಂದೆ ಪತ್ರ ಬರಹಗಾರರ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ತಾಲೂಕು ಅಧ್ಯಕ್ಷ ಕಿರಣ್ ದೇವರ, ಗೌರವಾಧ್ಯಕ್ಷ ಕೆ.ಪಿ.ಭದ್ರಶೆಟ್ಟಿ, ಉಪಾಧ್ಯಕ್ಷ ವಿ.ಪಂಚಾಕ್ಷರಿ, ಕಾರ್ಯದರ್ಶಿ ಜಿ.ಜಗದೀಶ್ ಗೌಡ, ಖಜಾಂಚಿ ವೈ.ಪಿ.ದೀಪಕ್ ರಾಜು ಇದ್ದರು.
ಕೂಡ್ಲಿಗಿ: ಹೊರ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲೂ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ಪತ್ರ ಬರಹಗಾರರ ಒಕ್ಕೂಟದಿಂದ ಉಪ ನೋಂದಣಿ ಇಲಾಖೆ ಕಚೇರಿ ಮುಂದೆ ಶುಕ್ರವಾರ ಮೌನ ಪ್ರತಿಭಟನೆ ನಡೆಯಿತು.
ಒಕ್ಕೂಟದ ತಾಲೂಕು ಅಧ್ಯಕ್ಷ ಕಿರಣ್ ದೇವರ ಮಾತನಾಡಿ, ಕಳೆದ ಒಂದು ವರ್ಷದಿಂದ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಸಚಿವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿ ಬೆಳಗಾವಿ ಅಧಿವೇಶನದಲ್ಲಿರುವ ಸಚಿವರ ಗಮನಸೆಳೆಯುವ ಉದ್ದೇಶದಿಂದ ಮೌನ ಪ್ರತಿಭಟನೆ ನಡೆಸಲಾಗುತ್ತಿದೆ. 16 ರಂದು ರಾಜ್ಯದ ಎಲ್ಲ ಪರವಾನಗಿ ಪಡೆದ ಪತ್ರಬರಹಗಾರರು ಬೆಳಗಾವಿ ಚಲೋ ನಡೆಸಿ ಸುವರ್ಣಸೌಧ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ನೋಂದಣಿಯಾಗುವ ಎಲ್ಲ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲರ ದೃಢೀಕರಣ ಕಡ್ಡಾಯಗೊಳಿಸಬೇಕು. ಪತ್ರ ಬರಹಗಾರರಿಗೆ ಸರ್ಕಾರದಿಂದ ಗುರುತಿನ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು. ತಾಲೂಕು ಗೌರವಾಧ್ಯಕ್ಷ ಕೆ.ಪಿ.ಭದ್ರಶೆಟ್ಟಿ, ಉಪಾಧ್ಯಕ್ಷ ವಿ.ಪಂಚಾಕ್ಷರಿ, ಕಾರ್ಯದರ್ಶಿ ಜಿ.ಜಗದೀಶ್ ಗೌಡ, ಖಜಾಂಚಿ ವೈ.ಪಿ.ದೀಪಕ್ ರಾಜು, ಸದಸ್ಯರಾದ ಜಗನ ನಾಯ್ಕ, ಎಸ್.ಇಸ್ಮಾಯಿಲ್, ಗುರುರಾಜ ಇತರರಿದ್ದರು.