ಕೊಟ್ಟೂರು ಎಪಿಎಂಸಿಯ ಮೆಕ್ಕೆಜೋಳ ನೋಂದಣಿ ಕೇಂದ್ರದ ಬಳಿ ನೋಂದಣಿ ಮಾಡಿಸಲು ಕಾಯುತ್ತಿರುವ ರೈತರು.
ಕೊಟ್ಟೂರು: ಮೆಕ್ಕೆಜೋಳ ಮಾರಾಟ ಮಾಡಲು ರೈತರು ಕೊಟ್ಟೂರು ಎಪಿಎಂಸಿಯಲ್ಲಿ ಪ್ರಾರಂಭವಾಗಿರುವ ಮೆಕ್ಕೆಜೋಳ ನೋಂದಣಿ ಕೇಂದ್ರದ ಬಳಿ ನಾಲ್ಕೈದು ದಿನ ಕಾಯುವಂತ ದುಸ್ಥಿತಿ ನಿರ್ಮಾಣವಾಗಿದೆ.
ಮುಂಗಾರು ಬೆಳೆ ಮೆಕ್ಕೆಜೋಳಕ್ಕೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ರೈತರ ಮೆಕ್ಕೆಜೋಳಕ್ಕೆ ಮಾರುಕಟ್ಟೆ ವಹಿವಾಟು ದರ ಪ್ರತಿ ಕ್ವಿಂಟಾಲ್‌ಗೆ 1900 ರೂ.ಗೆ 250 ರೂ., 1950 ರೂ.ಗೆ 200 ರೂ. ವ್ಯತ್ಯಾಸದ ಹಣವನ್ನು ಸರ್ಕಾರ ನೀಡುವುದಾಗಿ ಆದೇಶಿಸಿ ಕೆಲ ಷರತ್ತುಗಳನ್ನು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರೈತರು ಮೆಕ್ಕೆಜೋಳ ಮಾರಾಟಕ್ಕೆ ನೋಂದಣಿ ಕೇಂದ್ರದಲ್ಲಿ ನೋಂದಣಿ ಮಾಡಿಸಲು ಕೆಲಸ ಕಾರ್ಯಗಳನ್ನು ಬಿಟ್ಟು ನೋಂದಣಿ ಕೇಂದ್ರದ ಬಳಿ ಕಾಯುತ್ತಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಹೂವಿನಹಡಗಲಿ ತಾಲೂಕು ಮತ್ತು ಹೊಳಲಿನಲ್ಲಿ ಒಟ್ಟು 2 ನೋಂದಣಿ ಕೇಂದ್ರಗಳಿದ್ದು, ಉಳಿದ ತಾಲೂಕಿನಲ್ಲಿ ತಲಾ ಒಂದು ಕೇಂದ್ರ ತೆರೆಯಲಾಗಿದೆ. ಕೊಟ್ಟೂರು ಎಪಿಎಂಸಿ ನೋಂದಣಿಯಲ್ಲಿ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇಂತಹ ಬೃಹತ್ ಮಾರುಕಟ್ಟೆಗೆ ಒಂದೇ ಕೇಂದ್ರ ತೆರೆದಿರುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯ ರೈತರದ್ದು.
ಮೆಕ್ಕೆಜೋಳ ನೋಂದಣಿ ಕೇಂದ್ರದಲ್ಲಿ ಒಂದೇ ಲಾಗಿನ್ ವ್ಯವಸ್ಥೆ ಇದ್ದು, ಕೆಲ ಕಂದಾಯ ಗ್ರಾಮಗಳ ಬದಲಾವಣೆ, ಪ್ರೂಟ್ ಐಡಿ ಹಾಗೂ ರೈತರ ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿ ನೋಂದಣಿ ಮಾಡಲು ವಿಳಂಭವಾಗುತ್ತದೆ ಎಂದು ನೋಂದಣಿ ನೋಡಲ್ ಅಧಿಕಾರಿ ಭಗವಾನ ರಾವ್ ಹೇಳಿದ್ದಾರೆ.
ಸರ್ಕಾರ ಫೆ.7ಕ್ಕೆ ನೋಂದಣಿಗೆ ಅಂತಿಮ ದಿನ ಎಂದು ಆದೇಶಿಸಿದೆ. ನೋಂದಾಣಿ ಕೇಂದ್ರದಲ್ಲಿ ಈ ರೀತಿ ವಿಳಂಭವಾದರೆ ರೈತರಿಗೆ ಅನ್ಯಾಯವಾಗಲಿದೆ. ಈ ಹಿನ್ನೆಲೆ ವಿಜಯನಗರ ಜಿಲ್ಲಾಧಿಕಾರಿಗಳು ತ್ವರಿತ ನೋಂದಣಿ ಕಾರ್ಯಕ್ಕೆ ಕ್ರಮ ವಹಿಸಬೇಕು ಎಂದು ರೈತರು ಆಗ್ರಹಿಸಿದರು.
ಬೆರಳಚ್ಚು ದೃಢೀಕರಣ
ರಾಜ್ಯ ಸರ್ಕಾರದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಮೆಕ್ಕೆಜೋಳ ನೋಂದಣಿ ಮಾಡಿದವರು ಹಾಗೂ ಈಗಾಗಲೇ ಮಾರಟ ಮಾಡಿದ ರೈತರು ಕಡ್ಡಾಯವಾಗಿ ನೋಂದಣಿ ಕೇಂದ್ರದಲ್ಲಿ ಬೆರಳಚ್ಚು ದೃಢಿಕರಣ ಮಾಡಿಸಿದರೆ ಮಾತ್ರ ಖಾತೆಗೆ ಹಣ ಜಮ ಆಗಲಿದೆ. ಇಲ್ಲದಿದ್ದರೆ ಹಣ ಜಮ ಆಗುವುದು ಕಷ್ಟ.
ರಾಜ್ಯ ಸರ್ಕಾರದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ವ್ಯತ್ಯಾಸದ ಹಣ ಪಡೆಯುವ ಮೆಕ್ಕೆಜೋಳ ಬೆಳೆಗಾರರು ಜಿಲ್ಲೆಯ ಯಾವುದೇ ಕೇಂದ್ರದಲ್ಲಿ ನೋಂದಣಿ ಮಾಡಿಸಿ ಕೊಟ್ಟೂರು ಎಪಿಎಂಸಿಯಲ್ಲಿ ಮಾರಾಟ ಮಾಡಬಹುದು. ಇಲ್ಲಿಯೇ ನೊಂದಣಿ ಮಾಡಿಸಬೇಕು ಎಂಬ ನಿಯಮವಿಲ್ಲ. ಬೇರೆ ತಾಲೂಕಿನ ರೈತರು ಇಲ್ಲಿ ನೋಂದಣಿ ಹಾಗೂ ಮಾರಾಟಕ್ಕೆ ಬರುತ್ತಿರುವುದರಿಂದ ವಿಳಂಬವಾಗುತ್ತಿದೆ. ಕೂಡ್ಲಿಗಿ ತಾಲೂಕಿನಲ್ಲಿ ಕಡಿಮೆ ನೋಂದಣಿ ಆಗಿವೆ. ಆ ಭಾಗದ ರೈತರು ಅಲ್ಲಿಯೇ ನೋಂದಣಿ ಮಾಡಿಸಿದರೆ ಇಲ್ಲಿ ಕಾಯುವ ಸ್ಥಿತಿ ನಿರ್ಮಾಣ ಆಗಲಾರದು.