ಕಂಪ್ಲಿ ಹಳೆಯ ಬಸ್ ನಿಲ್ದಾಣದಲ್ಲಿರುವ ಪುರುಷರ ಮೂತ್ರಗೃಹದ ಹೊರನೋಟ.
ಕಂಪ್ಲಿ: ಪಟ್ಟಣದ ಹಳೆಯ ಬಸ್ ನಿಲ್ದಾಣದಲ್ಲಿ ಪುರುಷರ ಮೂತ್ರಗೃಹ ಸ್ವಚ್ಛಗೊಳಿಸಬೇಕೆಂದು ಸಾರ್ವಜನಿಕರು ಪುರಸಭೆ ಆಡಳಿತವನ್ನು ಆಗ್ರಹಿಸಿದ್ದಾರೆ.
ಹಳೆಯ ಬಸ್ ನಿಲ್ದಾಣದಲ್ಲಿನ ಪುರುಷರ ಮೂತ್ರಗೃಹ ದುರ್ವಾಸನೆಯಿಂದ ಕೂಡಿದೆ. ಸ್ವಚ್ಛತೆ ಕೊರತೆಯಿಂದಾಗಿ ಅದನ್ನು ಸಮರ್ಪಕವಾಗಿ ಬಳಸಲಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕ ಸ್ಥಳದಲ್ಲಿಯೇ ಜನರು ಮೂತ್ರ ಮಾಡುವಂತಾಗಿದೆ. ಮೂತ್ರಗೃಹದಲ್ಲಿ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಛತೆ ಕೈಗೊಳ್ಳಬೇಕು. ಸಮರ್ಪಕವಾಗಿ ನೀರು ಹರಿದು ಹೋಗುವಂತೆ ಮಾಡಿ ದುರ್ವಾಸನೆ ಮುಕ್ತಗೊಳಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಆರೋಗ್ಯ ಹಿರಿಯ ನಿರೀಕ್ಷಕ ಪ್ರಕಾಶ್ ಬಾಬು, ಪ್ರತಿ ಎರಡು ದಿನಗಳಿಗೊಮ್ಮೆ ಮೂತ್ರಗೃಹ ಸ್ವಚ್ಛಗೊಳಿಸಲು ಕ್ರಮವಹಿಸಲಾಗುವುದು. ಸಾರ್ವಜನಿಕರು ಸಹ ಮೂತ್ರಗೃಹವನ್ನು ಸರಿಯಾಗಿ ಬಳಕೆ ಮಾಡಬೇಕೆಂದು ತಿಳಿಸಿದ್ದಾರೆ.