ಬಳ್ಳಾರಿಯ ಗಾಂಧಿಭವನದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ನಮ್ಮೂರ ಶಾಲೆ ಉಳಿಸಿ, ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕು ರಕ್ಷಿಸಿ ಎಂದು ಘೋಷಣೆ ಕೂಗಿದರು. ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಪದಾಧಿಕಾರಿಗಳಾದ ನಾಗರತ್ನ ಎಸ್.ಜಿ., ಡಾ.ಪ್ರಮೋದ್, ವಿಜಯಲಕ್ಷ್ಮೀ, ಗುರಳ್ಳಿ ರಾಜ, ಜಗದೀಶ್ ನೇಮಕಲ್ ಇತರರಿದ್ದರು 
ಬಳ್ಳಾರಿ

ಮ್ಯಾಗ್ನೆಟ್ ಶಾಲೆ ಕೆಟ್ಟ ಯೋಜನೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಯೋಜನೆ
ಬಳ್ಳಾರಿ : ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸರ್ಕಾರ ಸಾಲ ಮಾಡಿ ತೆರೆಯುತ್ತಿದೆ. ಇದೊಂದು ಕೆಟ್ಟ ಯೋಜನೆ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಬೇಸರ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ಎಐಡಿಎಸ್‌ಒ ಸಂಘಟನೆಯಿಂದ ಸರ್ಕಾರಿ ಶಾಲೆ ಉಳಿವಿಗಾಗಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು. ನಾವು ಕಟ್ಟುವ ತೆರಿಗೆಯಿಂದ ನಮ್ಮ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಬದಲಿಗೆ ಮುಚ್ಚುತ್ತಿರುವ ಸರ್ಕಾರದ ನೀತಿಯ ವಿರುದ್ಧ ಜನ ಹೋರಾಟಕ್ಕೆ ಇಳಿಯಬೇಕಿದೆ. ಗ್ರಾಮೀಣ ಶಾಲೆಗಳನ್ನು ಮುಚ್ಚಿ ಮಕ್ಕಳನ್ನು ಶಿಕ್ಷಣದಿಂದ ಅಚೆ ತಳ್ಳುವ ಹುನ್ನಾರ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹಿಂದೆ ಅಡಗಿದೆ ಎಂದು ಕಿಡಿಕಾರಿದರು.
ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಅಭಯ್ ದಿವಾಕರ್ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಸಾರ್ವಜನಿಕ ಶಿಕ್ಷಣಕ್ಕೆ ಸರ್ಕಾರ ತಿಲಾಂಜಲಿ ಇಡಲು ಹೊರಟಿದೆ. ಇದರಿಂದಾಗಿ ಸಮಾಜದ ಕೆಳ ವರ್ಗದ ಮಕ್ಕಳು, ದಲಿತರು, ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗಬೇಕೆಂದು ಹೋರಾಡಿದ ಮಹನೀಯರ ಕನಸುಗಳು ಮೂಲೆ ಗುಂಪಾಗುತ್ತಿವೆ. ಈ ಜನ ವಿರೋಧಿ ನೀತಿಯ ವಿರುದ್ಧ ಪ್ರಜಾತಾಂತ್ರಿಕ ಚಳವಳಿ ನಡೆಯಬೇಕಾಗಿದೆ ಎಂದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ನಾಗರತ್ನ ಎಸ್.ಜಿ. ಮಾತನಾಡಿ, ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು, ಆದರೆ ಇಂದಿನ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಆ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳಲು ಹೊರಟಿವೆ ಎಂದರು.
===