ಬಳ್ಳಾರಿಯ ದುರ್ಗಮ್ಮ ದೇವಸ್ಥಾನದಲ್ಲಿ ರಸ್ತೆಯಲ್ಲಿ ಯಥಾಸ್ಥಿತಿಯಂತೆ ವಾಹನಗಳು ಸಂಚರಿಸಿದವು.
- ಜಿಲ್ಲಾದ್ಯಂತ ಜನಜೀವನ ಯಥಾಸ್ಥಿತಿ
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಸಂಪೂರ್ಣ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಹಾಗೂ ತಾಲೂಕು ಕೇಂದ್ರಗಳಲ್ಲಿ ಜನಜೀವನ ಸಂಪೂರ್ಣ ಸಾಮಾನ್ಯವಾಗಿತ್ತು.
ಬೆಳಗ್ಗೆಯಿಂದಲೇ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು, ಆಟೋರಿಕ್ಷಾಗಳ ಸಂಚಾರ ಎಂದಿನಂತೆ ತಡೆರಹಿತವಾಗಿ ಸಾಗಿದವು. ನಗರದ ಪ್ರಮುಖ ಹೋಟೆಲ್, ತರಕಾರಿ ಮಾರುಕಟ್ಟೆ, ಮಳಿಗೆ ಹಾಗೂ ಅಂಗಡಿ ಮುಂಗ್ಗಟ್ಟುಗಳು ತೆರೆದಿದ್ದು, ವ್ಯಾಪಾರ ವಹಿವಾಟು ಜೋರಾಗಿತ್ತು. ಎಪಿಎಂಸಿ ಮಾರುಕಟ್ಟೆ, ರಸಗೊಬ್ಬರ ಹಾಗೂ ವಾಣಿಜ್ಯ ಚಟುವಟಿಕೆಗಳ ಮಳಿಗೆಗಳಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದ ದೃಶ್ಯ ಕಂಡುಬಂತು.
ಜಿಲ್ಲೆಯಲ್ಲಿ ಕಮ್ಯೂನಿಸ್ಟ್, ರೈತ, ಕನ್ನಡ ಹಾಗೂ ಸಾಮಾಜಿಕ ಸಂಘಟನೆಗಳು ಸಕ್ರಿಯವಾಗಿದ್ದರೂ, ಬಂದ್‌ಗೆ ಪ್ರತ್ಯಕ್ಷ ಬೆಂಬಲ ನೀಡಲಿಲ್ಲ. ನಗರದಲ್ಲಿ ಸಾಂಕೇತಿಕ ಪ್ರತಿಭಟನ ಮೆರವಣಿಗೆ ನಡೆಯದ ಹಿನ್ನಲೆಯಲ್ಲಿ ಬಂದ್ ವಾತಾವರಣ ಸಂಪೂರ್ಣವಾಗಿ ಕ್ಷೀಣಿಸಿತ್ತು. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಯಥಾಸ್ಥಿತಿ ಕಾರ್ಯ ನಿರ್ವಹಿಸಿದವು. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಆಗಮಿಸುತ್ತಿದ್ದದ್ದು ಸಾಮಾನ್ಯವಾಗಿತ್ತು. ಶಾಲೆ, ಕಾಲೇಜು ಹಾಗೂ ಬ್ಯಾಂಕ್‌ಗಳು ನಿಗದಿತ ವೇಳೆಗೆ ಕಾರ್ಯಾರಂಭ ಮಾಡಿದವು. ನಗರ ಮಾತ್ರವಲ್ಲದೆ ಜಿಲ್ಲೆಯ ಕುರುಗೋಡು, ಕಂಪ್ಲಿ, ಸಿರಗುಪ್ಪ ಹಾಗೂ ಸಂಡೂರು ತಾಲೂಕು ಕೇಂದ್ರಗಳಲ್ಲೂ ಬಂದ್‌ಗೆ ಯಾವುದೇ ಬೆಂಬಲ ವ್ಯಕ್ತವಾಗಲಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಪ್ರಮುಖ ವೃತ್ತಗಳು, ಬಸ್ ನಿಲ್ದಾಣ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಒಟ್ಟಾರೆ, ಕಾವೇರಿ ಹೋರಾಟದ ಬಂದ್ ಕಾವು ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ.