ತಿಪ್ಪೇಸ್ವಾಮಿ 
ಬಳ್ಳಾರಿ

ಆರ್‌ಡಿಪಿಆರ್ ಎಇಇ ಮೇಲೆ ಲೋಕಾಯುಕ್ತ ದಾಳಿ

ಪ್ರಮುಖ ಮುಖ್ಯಾಂಶಗಳು

  • ಅದಾಯ ಮೀರಿ ಆಸ್ತಿ ಗಳಿಕೆ ಆರೋಪ
  • ಆಸ್ತಿ ಹಾಗೂ ಹಣಕಾಸು ಮಾಹಿತಿ
ಬಳ್ಳಾರಿ : ಸಿರಗುಪ್ಪ ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಎಇಇ ತಿಪ್ಪೇಸ್ವಾಮಿಯ ಮನೆ ಹಾಗೂ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಅದಾಯಕ್ಕಿಂತ ಮೀರಿ ಆಸ್ತಿ ಸಂಪಾದಿಸಿರುವ ಆರೋಪದಡಿ ಲೋಕಾಯುಕ್ತ ಎಸ್ಪಿ ವಾಸುದೇವ ನೇತೃತ್ವದಲ್ಲಿ ಮೂರು ತಂಡಗಳಾಗಿ ನಡೆದ ಕಾರ್ಯಾಚರಣೆಯಲ್ಲಿ ತಿಪ್ಪೇಸ್ವಾಮಿ ಇಲ್ಲಿನ ಹನುಮಾನ್ ನಗರ ನಿವಾಸ, ಕುಡತಿನಿ ಪಟ್ಟಣದ ನಿವಾಸ ಹಾಗೂ ಸಿರಗುಪ್ಪ ತಾಲೂಕಿನ ಆರ್‌ಡಿಪಿಆರ್ ಕಚೇರಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಯಿತು.
ದಾಳಿಯಲ್ಲಿ 300 ಗ್ರಾಂ ಚಿನ್ನಾಭರಣ, 800 ಗ್ರಾಂ ಬೆಳ್ಳಿಯ ಆಭರಣ, ಆರು ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಒಂದು ಲಕ್ಷ ರೂ. ನಗದು ಪತ್ತೆ ಹಚ್ಚಲಾಗಿದೆ. ಅಲ್ಲದೆ, ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂ. ಹಣವನ್ನು ತನಿಖೆಯ ಭಾಗವಾಗಿ ಸ್ಥಗಿತಗೊಳಿಸಲಾಗಿದೆ.ಲೋಕಾಯುಕ್ತ ಅಧಿಕಾರಿಗಳು ನಾನಾ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಸಂಬಂಧ ಆಸ್ತಿಗಳ ವಿವರ, ಆದಾಯ ಮೂಲಗಳು ಹಾಗೂ ಹಣಕಾಸು ವ್ಯವಹಾರಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆರ್‌ಡಿಪಿಆರ್ ಕಚೇರಿಯಲ್ಲಿಯೂ ದಾಖಲೆಗಳು ಪರಿಶೀಲಿಸಿ ವಶಕ್ಕೆ ಪಡೆಯಲಾಗಿದೆ. ಪತ್ತೆಯಾದ ಆಸ್ತಿ ಹಾಗೂ ಹಣಕಾಸು ಮಾಹಿತಿಯ ಮೌಲ್ಯಮಾಪನದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.