ಬಳ್ಳಾರಿಯ ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾ. ಸಿದ್ದಲಿಂಗ ಪ್ರಭು ಮಾತನಾಡಿದರು. ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಎಚ್.ಎ.ಮೋಹನ್ ಇದ್ದರು.
- ರಾಷ್ಟ್ರೀಯ ಲೋಕ ಅದಾಲತ್
- ಮುಕ್ತಿ ನೀಡುವಲ್ಲಿ ಯಶಸ್ವಿ
ಬಳ್ಳಾರಿ : ಎಲ್ಲರಿಗೂ, ಶೀಘ್ರ ಹಾಗೂ ಉಚಿತವಾಗಿ ನ್ಯಾಯ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಮಾತನಾಡಿದರು. ಈ ವ್ಯವಸ್ಥೆಯು ಕಕ್ಷಿದಾರರಿಗೆ ಸುದೀರ್ಘ ಕೋರ್ಟ್ ಪ್ರಕ್ರಿಯೆಗಳಿಂದ ಮುಕ್ತಿ ನೀಡುವಲ್ಲಿ ಯಶಸ್ವಿಯಾಗಿದೆ. ಇದೊಂದು ಸಾರ್ವಜನಿಕರಿಗೆ ಶೀಘ್ರ, ಉಚಿತ ಮತ್ತು ಸೌಹಾರ್ದಯುತ ನ್ಯಾಯ ಒದಗಿಸುವ ವ್ಯವಸ್ಥೆಯಾಗಿದ್ದು, ವ್ಯಾಜ್ಯವಿರುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆಯ ಅತ್ಯಂತ ಪ್ರಮುಖ ಹಾಗೂ ಜನಪ್ರಿಯ ವೇದಿಕೆಯಾಗಿ ಹೊರಹೊಮ್ಮಿರುವ ರಾಷ್ಟ್ರೀಯ ಲೋಕ ಅದಾಲತ್ ದೇಶಾದ್ಯಂತ ನಡೆಯುತ್ತಿದೆ. ಸಾಮಾನ್ಯ ನ್ಯಾಯಾಲಯಗಳಲ್ಲಿ ವರ್ಷಾನುಗಟ್ಟಲೆ ನಡೆಯುವ ಪ್ರಕರಣಗಳಿಗೆ ಅದಾಲತ್‌ನಲ್ಲಿ ಸುದೀರ್ಘ ವಾದ-ಪ್ರತಿವಾದಗಳಿಲ್ಲದೆ, ಉಭಯ ಪಕ್ಷಕಾರರ ಪರಸ್ಪರ ಒಪ್ಪಂದದೊಂದಿಗೆ ಒಂದೇ ದಿನದಲ್ಲಿ ಅತ್ಯಂತ ವೇಗವಾಗಿ ಶಾಶ್ವತ ಪರಿಹಾರ ಸಿಗುತ್ತದೆ ಎಂದರು.
ರಾಜಿಯಾಗಬಲ್ಲ ಕ್ರಿಮಿನಲ್ ಮೊಕದ್ದಮೆಗಳು, ಸಿವಿಲ್ ದಾವೆಗಳು, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಮೋಟಾರು ವಾಹನ ಅಪಘಾತ ವಿಮೆ ಪ್ರಕರಣಗಳು, ಕೌಟುಂಬಿಕ ಕಲಹಗಳು ಹಾಗೂ ಭೂಸ್ವಾಧೀನ ಪರಿಹಾರ ಪ್ರಕರಣಗಳನ್ನು ಇಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು. ಇಂದಿನ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 36,188 ಬಾಕಿ ಇರುವ ಪ್ರಕರಣಗಳ ಪೈಕಿ, 8,882 ಪ್ರಕರಣಗಳನ್ನು ಲೋಕ ಅದಾಲತ್‌ಗೆ ಉಲ್ಲೇಖಿಸಲಾಗಿದ್ದು, ಇದರಲ್ಲಿ 4,957 ಪ್ರಕರಣಗಳು ಸೌಹಾರ್ದಯುತ ರಾಜಿಗೆ ಸಂಪೂರ್ಣವಾಗಿ ಸಿದ್ಧಗೊಂಡಿವೆ ಎಂದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಎ.ಮೋಹನ್ ಮಾತನಾಡಿ, ಲೋಕ ಅದಾಲತ್ ನೀಡುವ ತೀರ್ಪು ಸಿವಿಲ್ ನ್ಯಾಯಾಲಯದ ತೀರ್ಪಿಗೆ ಸಮನಾಗಿರುತ್ತದೆ. ಇದರ ವಿರುದ್ಧ ಯಾವುದೇ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ, ಇದರಿಂದ ಪ್ರಕರಣಕ್ಕೆ ಇಲ್ಲಿಯೇ ಶಾಶ್ವತ ಮುಕ್ತಿ ಸಿಗುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಸೌಹಾರ್ದತೆ ಮೂಡಿಸಲು ಮತ್ತು ಸಾಮಾನ್ಯ ನ್ಯಾಯಾಲಯಗಳ ಮೇಲಿನ ಪ್ರಕರಣಗಳ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಲೋಕ ಅದಾಲತ್ ಅತ್ಯುತ್ತಮ ವೇದಿಕೆಯಾಗಿದೆ ಎಂದರು.