ಬಳ್ಳಾರಿಯ ನಂದಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಎಸ್‌ಐಆರ್ ಕುರಿತು ವಿಶೇಷ ಜಾಗೃತಿ ಅಭಿಯಾನದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು 
ಬಳ್ಳಾರಿ

ಕಾಲೇಜುಗಳಲ್ಲಿ ಸಾಕ್ಷರತಾ ಕ್ಲಬ್ ಆರಂಭ

ಪ್ರಮುಖ ಮುಖ್ಯಾಂಶಗಳು

  • ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹತೆ
  • ಅಭಿಯಾನದ ಮುಖ್ಯ ಉದ್ದೇಶ
ಬಳ್ಳಾರಿ : ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಿಶೇಷ ಸಮಗ್ರ ಪರಿಷ್ಕರಣೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಹೇಳಿದರು.
ನಗರದ ನಂದಿ ಪಿಯು ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ಎಸ್‌ಐಆರ್ ಕುರಿತು ವಿಶೇಷ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆಯಲಿರುವ ಹೊಸ ಯುವ ಮತದಾರರನ್ನು ಗುರುತಿಸಿ ಪಟ್ಟಿಗೆ ಸೇರಿಸುವುದು.
ಹಿಂದೆ ನಡೆದಿರುವಂತೆ ಒಬ್ಬರೇ ವ್ಯಕ್ತಿ ಹಲವು ಬಾರಿ ಮತದಾನ ಮಾಡುವುದು ಅಥವಾ ಮೃತಪಟ್ಟವರ ಹೆಸರಿನಲ್ಲಿ ಮತದಾನ ತಡೆಯಲು ಹಳೆಯ ಮತದಾರರ ವಿವರಗಳನ್ನು ಕಟ್ಟುನಿಟ್ಟಾಗಿ ಮರುಪರಿಶೀಲಿಸಲಾಗುತ್ತದೆ. ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಿಲ್ಲದ, ದೋಷಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಎಸ್‌ಐಆರ್ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಸದ್ಯದಲ್ಲೇ ಮತದಾನದ ವಯಸ್ಸನ್ನು ತಲುಪಲಿರುವ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪ್ರತಿ ಕಾಲೇಜಿನಲ್ಲೂ ಮತದಾರರ ಸಾಕ್ಷರತಾ ಕ್ಲಬ್ ಅನ್ನು ಸ್ಥಾಪಿಸಲಾಗಿದೆ. ರಾಜಕೀಯ ವಿದ್ಯಮಾನಗಳು ಮತ್ತು ಚುನಾವಣಾ ಪ್ರಕ್ರಿಯೆಗಳಿಂದ ಯುವಕರು ದೂರ ಉಳಿಯಬಾರದು, ಬದಲಿಗೆ ಪ್ರಜಾಪ್ರಭುತ್ವದ ಸಕ್ರಿಯ ಪಾಲುದಾರರಾಗಬೇಕು ಎಂಬುದು ಈ ಕ್ಲಬ್‌ನ ಉದ್ದೇಶವಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಕುಟುಂಬದ ಯಾವುದೇ ಅರ್ಹ ಸದಸ್ಯರ ಹೆಸರು ಸೂಕ್ತ ದಾಖಲೆಗಳ ಕೊರತೆಯಿಂದಾಗಿ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಹೊಂದಬೇಕು ಎಂದರು.