ಬಾದನಹಟ್ಟಿ ಗ್ರಾಮದಲ್ಲಿ ಉಡುಸಲಮ್ಮ ದೇವಿ ದೇವಸ್ಥಾನದ ಪಂಚ ಕಲಶಗಳ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
- ಶ್ರೀ ವಾಮದೇವ ಶಿವಾಚಾರ್ಯರನ ಆಶೀರ್ವಚನ
- ಬಾದನಹಟ್ಟಿಯಲ್ಲಿ ಪಂಚ ಕಲಶಗಳ ಮೆರವಣಿಗೆ
ಕುರುಗೋಡು: ಬಾದನಹಟ್ಟಿ ಗ್ರಾಮದ ಅಧಿದೇವತೆ ಉಡುಸಲಮ್ಮ ದೇವಿ ದೇವಸ್ಥಾನದ ಉತ್ತರ ಮತ್ತು ದಕ್ಷಿಣ ದಿಕ್ಕಿನ ಗೋಪುರಗಳ ಕಲಶಾರೋಹಣ ಕಾರ್ಯಕ್ರಮ ಜರುಗಿತು.
ಕಲಶಾರೋಹಣದ ಅಂಗವಾಗಿ ದೇವಸ್ಥಾನದಲ್ಲಿ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಕಲಶಾರೋಹಣಕ್ಕೂ ಮುನ್ನ ಪಂಚಕಲಶಗಳ ಅದ್ದೂರಿ ಮೆರವಣಿಗೆ ಜರುಗಿತು. ಗ್ರಾಮದ ಬಾವಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಡುಸಲಮ್ಮ ದೇವಿ ದೇವಸ್ಥಾನಕ್ಕೆ ತಲುಪಿತು.
ಸುಮಂಗಳೆಯರ 108 ಕಳಸ ಮತ್ತು ಪೂರ್ಣಕುಂಭ ಹಾಗೂ ನಾನಾ ಮಂಗಳವಾದ್ಯಗಳು ಮೆರವಣಿಗೆಗೆ ಮೆರುಗು ಹೆಚ್ಚಿಸಿದ್ದವು. ಕಲಶಾರೋಹಣ ಕಾರ್ಯಕ್ರಮದಲ್ಲಿ ಸರ್ವ ಸಮುದಾಯದ ಭಕ್ತರು ಪಾಲ್ಗೊಂಡಿದ್ದರು. ಗ್ರಾಮದ ಮಹಿಳೆಯರು ಉಡಿ ತುಂಬಿಸಿಕೊಂಡು ದೇವಸ್ಥಾನಕ್ಕೆ ತೆರಳಿ, ದೇವಿ ದರ್ಶನ ಪಡೆದು, ಹೂ-ಹಣ್ಣು, ಕಾಯಿ ಅರ್ಪಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಎಮ್ಮಿಗನೂರಿನ ಹಂಪಿ ಸಾವಿರ ದೇವರು ಮಠದ ಶ್ರೀ ವಾಮದೇವ ಶಿವಾಚಾರ್ಯರು ಆಶೀರ್ವಚನ ನೀಡಿ, ಬ್ರಹ್ಮ, ವಿಷ್ಣು, ಮಹೇಶ್ವರ, ಸಪ್ತಸಾಗರ, ಗಂಗೆ, ಯಮುನೆ, ಸರಸ್ವತಿ, ವಸುಂಧರೆ ದೇವತೆಗಳು ಕಲಶದಲ್ಲಿ ನೆಲೆಸಿದ್ದಾರೆ. ಗೋಪುರದ ಕಲಶ ದರ್ಶನ ಪಡೆದರೆ ಮುಕ್ತಿ ಪ್ರಾಪ್ತಿಯಾಗುತ್ತದೆ ಎಂದು ವೇದಗಳು ಹೇಳುತ್ತವೆ. ಪೃಥ್ವಿ, ಅಗ್ನಿ, ಜಲ, ವಾಯು, ಆಕಾಶ ಪಂಚತತ್ವದ ಆಧಾರದಲ್ಲಿ ಪಂಚ ಲೋಹಗಳನ್ನು ಬಳಸಿ ಮಾಡಿರುವ ಪಂಚ ಕಲಶಗಳನ್ನು ಗೋಪುರಕ್ಕೆ ಆರೋಹಣ ಮಾಡಿದ ಬಾದನಹಟ್ಟಿಯ ಭಕ್ತರು ಹಂಪಿಯ ಗತವೈಭವ ಮರುಕಳಿಸುವಂತೆ ಮಾಡಿದ್ದಾರೆ ಎಂದು ನುಡಿದರು.
ಕಲ್ಲುಕಂಬ ಗ್ರಾಮದ ರುದ್ರಮುನಿ ತಾತ, ಬಿಳೆಹಾಳು ರಾಮಯ್ಯ ತಾತ, ಕರಿಬಸವ ಶರಣ, ಶರಣೆ ಯಲ್ಲಮ್ಮ ತಾಯಿ , ಫಕ್ಕೀರಪ್ಪ ತಾತ, ಸತೀಶ್ ರೆಡ್ಡಿ , ಸಣ್ಣವೀರರೆಡ್ಡಿ, ಚಾನಾಳು ಶೇಖರ್ ಇದ್ದರು.