ಇಟ್ಟಿಗಿ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಬೂದು ನೀರು ನಿರ್ವಹಣಾ ಕಾಮಗಾರಿ ಯನ್ನು ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಗುರುವಾರ ಪರಿಶೀಲಿಸಿದರು. ಜಿಪಂ ಜಿಲ್ಲಾ ಸಹಾಯಕ ಯೋಜನಾಧಿಕಾರಿ ಉಮೇಶ್ ಮೈನಹಳ್ಳಿ, ತಾಪಂ ಇಒ ಪರಮೇಶ್ವರ, ಪಿಆರ್‌ಡಿ ಯ ಎಇಇ ಕುಬೇಂದ್ರನಾಯ್ಕ, ಪಿಡಿಒ ಉಮೇಶ್ ಜಹಗೀರ್ ಹಾಗೂ ಇತರರಿದ್ದರು.
- ಕಾಯಕಗ್ರಾಮ ಅನುಷ್ಠಾನ ಸಭೆ
- ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಪರಿಶೀಲನೆ
- ಬೂದು ನೀರು ನಿರ್ವಹಣಾ ಘಟಕದ ಕಾಮಗಾರಿ
ಹೂವಿನಹಡಗಲಿ: ಗ್ರಾಮೀಣ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಗ್ರಾಮ ಮಟ್ಟದ ಅಧಿಕಾರಿಗಳು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಹೇಳಿದರು.
ತಾಲೂಕಿನ ವಿವಿಧ ಗ್ರಾಪಂಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಯೋಜನೆಗಳ ಕಾಮಗಾರಿ ಹಾಗೂ ಮಕರಬ್ಬಿ ಗ್ರಾಮದಲ್ಲಿ ಗುರುವಾರ ನಡೆದ ಕಾಯಕಗ್ರಾಮ ಅನುಷ್ಠಾನ ಸಭೆಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಬೂದು ನೀರು ನಿರ್ವಹಣಾ ಘಟಕದ ಕಾಮಗಾರಿ ನಡೆಸಲಾಗುತ್ತಿದೆ. ಗ್ರಾಮೀಣ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಬೇಕು ಎಂದರು.
ನಂತರ ಅವರು ಹೊಳಲು ಗ್ರಾಪಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಜೀವಿನಿ ಮಹಿಳಾ ಒಕ್ಕೂಟದಿಂದ ಸಿದ್ಧವಾದ ಕಿಸಾನ್ ಪರಿಕರಗಳ ಮಾರಾಟಕ್ಕೆ ಸ್ಥಳಾವಕಾಶ ಮಾಡಿಕೊಡಲು ಗ್ರಾಪಂ ಮತ್ತು ಒಕ್ಕೂಟದೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಹಗರನೂರು ಗ್ರಾಮದಲ್ಲಿ ತಂತ್ರಜ್ಞಾನದ ಬಳಕೆಯಿಂದ ತೆರಿಗೆ ವಸೂಲಿ ರಸೀದಿಯನ್ನು ಸಾರ್ವಜನಿಕರಿಗೆ ವಿತರಿಸಿದರು. ಇದಕ್ಕೂ ಮೊದಲು ಇಟ್ಟಿಗಿ, ಹೊಳಗುಂದಿ, ದಾಸರಹಳ್ಳಿ ತಾಂಡಾ ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿರುವ ಬೂದು ನೀರು ನಿರ್ವಹಣಾ ಕಾಮಗಾರಿ ಹಾಗೂ ಹಗರನೂರು ಗ್ರಾಮದಲ್ಲಿನ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಪರಿಶೀಲಿಸಿದರು.
ಜಿಪಂ ಜಿಲ್ಲಾ ಸಹಾಯಕ ಯೋಜನಾಧಿಕಾರಿ ಉಮೇಶ ಮೈನಹಳ್ಳಿ, ತಾಪಂ ಇಒ ಪರಮೇಶ್ವರ, ಪಿಆರ್‌ಡಿ ಯ ಎಇಇ ಕುಬೇಂದ್ರನಾಯ್ಕ, ತಾಪಂ ನರೇಗಾ ಸಹಾಯಕ ನಿರ್ದೇಶಕ ವೀರಣ್ಣನಾಯ್ಕ, ಇಟ್ಟಿಗಿ ಗ್ರಾಪಂ ಪಿಡಿಒಗಳಾದ ಉಮೇಶ್ ಜಹಗೀರ್, ಶರಣಪ್ಪ, ಶೈಲಗೌಡ, ಆನಂದನಾಯ್ಕ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.