ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೂಡ್ಲಿಗಿಯಲ್ಲಿ ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ದಸಂಸ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಎಸ್.ದುರುಗೇಶ, ತಾಲೂಕು ಸಂಚಾಲಕ ಎಚ್.ದುರುಗೇಶ, ಕಂದಗಲ್ಲು ಪರಶುರಾಮ, ಜಿತೇಂದ್ರ, ರಮೇಶ್, ಟಿ.ಕೃಷ್ಣಪ್ಪ, ಎ.ಕೆ.ಮಂಜಪ್ಪ, ಕೆ.ಮೂಗಪ್ಪ ಇತರರಿದ್ದರು.
ಕೂಡ್ಲಿಗಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂರ್ಘ ಸಮಿತಿ ತಾಲೂಕು ಘಟಕದಿಂದ ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಸ್.ದುರುಗೇಶ ಮಾತನಾಡಿ, ತಾಲೂಕು ಹೆಚ್ಚಿನ ಹಳ್ಳಿಗಳನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಎಸ್ಸಿ, ಎಸ್ಟಿ ಜನರಿದ್ದಾರೆ. ತಾಲೂಕಿನ ಪ್ರತಿಹಳ್ಳಿಗಳಲ್ಲಿಯೂ ಮೂಲ ಸೌಕರ್ಯಗಳ ಕೊರತೆಯಿದೆ.
ನಮ್ಮ ಸಮುದಾಯವು ಸಾಮಾಜಿಕ ಅಸಮಾನತೆಯನ್ನು ಹಾಗೂ ತಾರತಮ್ಯಗಳನ್ನು ಈಗಲೂ ಅನುಭವಿಸುತ್ತಿದೆ. ಪ್ರಬಲ ಸಮುದಾಯದವರು ನಮ್ಮವರ ಮೇಲೆ ದೌರ್ಜನ್ಯ ಎಸಗಿ ಮರಣಾಂತಿಕ ಹಲ್ಲೆಗಳನ್ನು ಮಾಡುತ್ತಿದ್ದಾರೆ. ಈ ಎಲ್ಲ ಘಟನೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದರು.
ಅಕ್ರಮ, ಸಕ್ರಮ ಯೋಜನೆಯಡಿ ಫಾರ್ಮ್ ನಂ.50, 53 ಮತ್ತು 57ರಡಿ ಸಲ್ಲಿಸಿರುವ ಅರ್ಜಿಗಳಿಗೆ ಈ ಕೂಡಲೇ ಪಟ್ಟಾ ಮಂಜೂರು ಮಾಡಬೇಕು. ತಾಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ್ಟ ಜಾತಿ ಜನರಿಗೆ ವಸತಿ ಸೌಲಭ್ಯ ಒದಗಿಸಬೇಕು. ಪರಿಶಿಷ್ಟ ಜಾತಿ ಸಮುದಾಯಕ್ಕೆ ಶಾಶ್ವತ ರುದ್ರಭೂಮಿ ಕಲ್ಪಿಸಿ ಕೊಡಬೇಕು. ಎಸ್ಸಿ ಕಾಲನಿಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸದ ಗ್ರಾಪಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.