ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ 
ಬಳ್ಳಾರಿ

ಹಲ್ಲೆ ನಿಷ್ಪಕ್ಷಪಾತ ತನಿಖೆ ನಡೆಯಲಿ

ಸಿರಗುಪ್ಪ: ಹೊನ್ನರಹಳ್ಳಿ ಗ್ರಾಮದಲ್ಲಿ ಬಡ ಕುಟುಂಬದವರ ಮೇಲೆ ಇತ್ತೀಚಿಗೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ವಹಿಸಬೇಕೆಂದು ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಹೊನ್ನರಹಳ್ಳಿಯ ಬಡ ಕುಟುಂಬಗಳು ಸರ್ಕಾರಿ ಜಮೀನನ್ನು ಸುಮಾರು 60 ವರ್ಷಗಳಿಂದ ಉಳುಮೆ ಮಾಡಿ ಜೀವನ ಸಾಗಿಸುತ್ತಿವೆ. ಆದರೆ, ಪ್ರಭಾವಿ ವ್ಯಕ್ತಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಭೂ ಮಂಜೂರಾತಿ ಸಮಿತಿ ಮೂಲಕ ತಮ್ಮ ಪರವಾಗಿ ಆದೇಶ ಮಾಡಿಸಿಕೊಂಡಿದ್ದಾರೆ. ಅನ್ಯಾಯವನ್ನು ಪ್ರಶ್ನಿಸಿದ ಬಡ ಕುಟುಂಬಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿದರು.
ಹಲ್ಲೆಗೊಳಗಾದವರು ಹಚ್ಚೊಳ್ಳಿ ಠಾಣೆಗೆ ಹೋದಾಗ ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಲ್ಲ. ಬಿಜೆಪಿ ಮಂಡಲ ಅಧ್ಯಕ್ಷ ಕೆ. ಮಲ್ಲಿಕಾರ್ಜುನಸ್ವಾಮಿ ಮಧ್ಯಪ್ರವೇಶದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ, ಆರೋಪಿಗಳ ವಿರುದ್ಧ ಸಣ್ಣ ಪ್ರಮಾಣದ ಕಲಂಗಳನ್ನು ಹಾಕಲಾಗಿದೆ ಹಲ್ಲೆಗೊಳಗಾದವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಎಸ್ಪಿ ಅವರಿಗೆ ಪ್ರಕರಣದ ಕುರಿತು ಮಾಹಿತಿ ನೀಡಲಾಗಿದೆ. ಸಂತ್ರಸ್ತರಿಗೆ ನ್ಯಾಯ ದೊರೆಯದಿದ್ದರೆ ಹಚ್ಚೊಳ್ಳಿಯಿಂದ ಸಿರಗುಪ್ಪ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೀರನಗೌಡ, ನಗರಸಭೆ ಮಾಜಿ ಸದಸ್ಯರಾದ ವಿಕ್ರಂ ಜೈನ್, ರಾಮಕೃಷ್ಣ, ಮೋಹನ್ ರೆಡ್ಡಿ, ನಟರಾಜ, ಪ್ರಮುಖರಾದ ಚಾಗಿ ಸುಬ್ಬಯ್ಯ, ಮಹಾದೇವ ಇದ್ದರು.