ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಎಐಕೆಕೆಎಂಎಸ್ ಸಂಘಟನೆ ವತಿಯಿಂದ ಬರಪೀಡಿತ ರಾಜ್ಯವೆಂದು ಘೋಷಿಸಿ ಎಂಬುದಾಗಿ ಪ್ರತಿಭಟಿಸಿದರು. ಸಂಘದ ಪದಾಧಿಕಾರಿಗಳಾದ ಈ.ಹನುಮಂತಪ್ಪ, ಗುರಳ್ಳಿ ರಾಜ, ಕೆ.ಪಂಪಾಪತಿ, ಈರಣ್ಣ, ಧನರಾಜ್, ಲಿಂಗಪ್ಪ, ಕೆ. ಬಸವರಾಜ್, ಮಲ್ಲಪ್ಪ, ಸಿದ್ದಲಿಂಗ ಇದ್ದರು.
ಬಳ್ಳಾರಿ : ಕರ್ನಾಟಕದಲ್ಲಿ ಮಳೆ ಕೊರತೆ ಹಿನ್ನೆಲೆ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಬರಪೀಡಿತ ರಾಜ್ಯವೆಂದು ಘೋಷಿಸಬೇಕು ಎಂದು ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್) ವತಿಯಿಂದ ಪ್ರತಿಭಟನೆ ನಡೆಯಿತು.
ಸಂಘದ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ರಾಜ್ಯಾದ್ಯಂತ ಬರಗಾಲ ಘೋಷಿಸಿ ಸಮರ್ಪಕ ಬರ ಪರಿಹಾರ ನೀಡಬೇಕು. ಎನ್‌ಡಿಆರ್‌ಎಫ್ ವಿಪತ್ತು ಪರಿಹಾರ ಮಾರ್ಗಸೂಚಿಗಳನ್ನು ಪ್ರಸಕ್ತ ಪರಿಸ್ಥಿತಿಗೆ ಅನುಗುಣವಾಗಿ ಪರಿಷ್ಕರಿಸಿ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರ ವಿತರಿಸಬೇಕು. ಜತೆಗೆ ರೈತರ ಸಾಲ ಮನ್ನಾ ಮಾಡಿ ಹಾಗೂ ಗ್ರಾಮೀಣ ಜನರಿಗೆ ವರ್ಷಪೂರ್ತಿ ಉದ್ಯೋಗ ಖಾತರಿಪಡಿಸಬೇಕು. ಪ್ರತಿಯೊಂದು ಕುಟುಂಬಕ್ಕೂ ವರ್ಷಕ್ಕೆ ಸಾಕಾಗುವಷ್ಟು ದಿನಸಿ ಕಿಟ್ ವಿತರಿಸಿ ಹಾಗೂ ಜಾನುವಾರುಗಳ ರಕ್ಷಣೆಗಾಗಿ ರಾಜ್ಯಾದ್ಯಂತ ಗೋಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.
ಬರದ ತೀವ್ರತೆಯಿಂದ ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಬಡಜನರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ವಿಳಂಬ ಮಾಡದೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.