ಹರಪನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ವಿಜಯನಗರ ಎಸ್ಪಿ ಎಸ್.ಜಾಹ್ನವಿ, ಡಿವೈಎಸ್‌ಪಿ ಡಾ.ಸಂತೋಷ್ ಚವ್ಹಾಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್‌ಐಗಳಾದ ಶಂಭುಲಿಂಗಯ್ಯ ಎಸ್.ಹಿರೇಮಠ, ವಿಜಯಕೃಷ್ಣ, ನಾಗರತ್ನಮ್ಮ ಇತರರಿದ್ದರು.
- ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸಲಹೆ
- ಜಾಗೃತಿ ಅಭಿಯಾನ
ಹರಪನಹಳ್ಳಿ: ಯುವಕರು ಪ್ರೀತಿ, ಪ್ರಣಯದ ವಿರಹ ಬೇಗುದಿಯಿಂದ ಮಾದಕ ವ್ಯಸನಿಗಳಾಗುತ್ತಿರುವುದು ನೋವಿನ ಸಂಗತಿ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪೊಲೀಸ್ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಮಾದಕ ವಸ್ತುಗಳ ಬಳಕೆ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಡ್ರಗ್ಸ್ ಸೇವನೆ ಪುರಾತನ ಕಾಲದಿಂದಲೂ ನಡೆಯುತ್ತಿದೆ. ಸನ್ಯಾಸಿಗಳು ಭೋಗ ಜೀವನ ತ್ಯಜಿಸಲು ಹುಕ್ಕಾ ಸೇವಿಸುತ್ತಿದ್ದರು. ಕಾಲ ಬದಲಾದಂತೆ ಯುವಕರು ಹವ್ಯಾಸವಾಗಿ ರೂಡಿಸಿಕೊಂಡಿದ್ದು, ಡ್ರಗ್ಸ್ ಸೇವನೆಗೆ ಬಲಿಯಾದವರು ಬಿಡಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಪಾಲಕರ ಪರಿಸ್ಥಿತಿ ಅರಿತು ಉತ್ತಮ ಹಾಗೂ ಸಂಸ್ಕಾರಯುತ ಜೀವನ ಸಾಗಿಸಿ ಎಂದರು.
ವಿಜಯನಗರ ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಕಳೆದ ಒಂದು ವರ್ಷದಿಂದ ವಿವಿಧ ಶಾಲಾ, ಕಾಲೇಜುಗಳಲ್ಲಿ ಮಾದಕ ವ್ಯಸನ ಮುಕ್ತಗೊಳಿಸಲು ಇಲಾಖೆಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ವಿದ್ಯಾರ್ಥಿ ಮನಸ್ಥಿತಿ ಚಂಚಲವಾಗಿದ್ದು, ಅಭಿರುಚಿ ಸ್ವೀಕರಿಸಲು ಬಯಸುತ್ತದೆ. ದುಶ್ಚಟ ಇರುವ ಸ್ನೇಹಿತರಿಂದ ದೂರವಿದ್ದು, ಸಭ್ಯ ಸ್ನೇಹಿತರ ವಿಶ್ವಾಸಗಳಿಸಿ ಯಶಸ್ಸಿನತ್ತ ಚಿತ್ತ ಹರಿಸಬೇಕು. ದುಶ್ಚಟಕ್ಕೆ ಪ್ರೇರೇಪಿಸುವವರಿಗೆ ಬೇಡ ಬ್ರೋ ಎಂದು ಅಂತರ ಕಾಪಾಡಿ ಆರೋಗ್ಯಯುತ ಜೀವನ ಸಾಗಿಸಿ ಎಂದು ತಿಳಿಸಿದರು.
ಡಿವೈಎಸ್ಪಿ ಡಾ.ಸಂತೋಷ್ ಚವ್ಹಾಣ್ ಮಾತನಾಡಿ, ಇತ್ತೀಚಿಗೆ ಮಾದಕ ದ್ರವ್ಯ ಸೇವನೆ ಸಾಂಕ್ರಾಮಿಕ ಪಿಡುಗಿನಂತೆ ಹಬ್ಬುತ್ತಿದ್ದು, ತಡೆಗಟ್ಟಲು ಸರ್ಕಾರ ಬೇಡ ಬ್ರೋ ಜಾಗೃತಿ ಅಭಿಯಾನ ಆರಂಭಿಸಿದೆ. ಬೇಡ ಎನ್ನುವುದು ಕೀಳರಿಮೆಯ ಸಂಕೇತವಲ್ಲ, ಧೈರ್ಯದ ಪ್ರತೀಕ ಎಂದು ಹೇಳಿದರು. ಬೇಡ ಬ್ರೋ ಜಾಗೃತಿ ಅಭಿಯಾನದ ಕಿರು ನಾಟಕ ಪ್ರದರ್ಶನ ಮಾಡಲಾಯಿತು.