ಕಾಯಕಬಂಧುಗಳಿಗೆ ಸಂಭಾವನೆ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೂವಿನಹಡಗಲಿಯಲ್ಲಿ ತಾಪಂ ಇಒ ಪರಮೇಶ್ವರಗೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸದಸ್ಯರಾದ ಬಿ.ಶಬ್ಬೀರ್ ಬಾಷಾ, ಬಿ.ವೀರಣ್ಣ, ಗೋಣೆಪ್ಪ, ಮಹಾಬಲೇಶ, ಎಚ್.ಮಂಜಪ್ಪ, ಎಂ.ನೀಲಪ್ಪ, ಶೈನಾಜ್ ಇತರರಿದ್ದರು.
- ತಾಪಂ ಇಒ ಪರಮೇಶ್ವರಗೆ ಮನವಿ
- ಸಂಘದ ಸದಸ್ಯ ಬಿ.ಶಬ್ಬೀರ್ ಬಾಷಾ ಒತ್ತಾಯ
ಹೂವಿನಹಡಗಲಿ: ನರೇಗಾ ಕಾಯಕಬಂಧುಗಳಿಗೆ ಸಂಭಾವನೆ ನೀಡಲು ಕೂಡಲೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದಿಂದ ಪಟ್ಟಣದ ತಾಪಂ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಾಪಂ ಇಒ ಪರಮೇಶ್ವರಗೆ ಮನವಿ ಸಲ್ಲಿಸಲಾಯಿತು.
ಸಂಘದ ಸದಸ್ಯ ಬಿ.ಶಬ್ಬೀರ್ ಬಾಷಾ ಮಾತನಾಡಿ, ನರೇಗಾ ಯೋಜನೆ ಕಾಯಕಬಂಧುಗಳಿಗೆ ದಿನಕ್ಕೆ ನಾಲ್ಕು ರೂ. ಸಂಭಾವನೆ ನೀಡಬೇಕಿದೆ. ಹಿರೇಹಡಗಲಿ ಗ್ರಾಪಂ ವ್ಯಾಪ್ತಿಯಲ್ಲಿ 62 ಕಾಯಕ ಬಂಧುಗಳಿದ್ದು, 15ರಿಂದ 20 ಜನರಿಗೆ ಮಾತ್ರ ಸಂಭಾವನೆ ಬಂದಿದೆ. ತಾಲೂಕಿನ ಬಹುತೇಕ ಗ್ರಾಪಂಗಳಲ್ಲಿ ಅರೆಬರೆಯಾಗಿ ಸಂಭಾವನೆ ನೀಡಲಾಗಿದೆ. ಸಂಭಾವನೆ ನೀಡುವಲ್ಲಿ ಪಿಡಿಒಗಳು ನಿರ್ಲಕ್ಷೃ ವಹಿಸಿದರೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಹಿರೇಹಡಗಲಿ, ನವಲಿ, ಸೋಗಿ, ಕೆ.ಅಯ್ಯನಹಳ್ಳಿ, ಮಹಾಜನದಹಳ್ಳಿ, ಬೀರಬ್ಬಿ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡಿರುವ ಕೂಲಿ ಕಾರ್ಮಿಕರಿಗೆ ಕೂಲಿ ಹಣ ನಿಡುವಲ್ಲಿ ತಡವಾಗಿದೆ. ತಾಲೂಕಿನ ಅನೇಕ ಹಳ್ಳಗಳು ಒತ್ತುವರಿಯಾಗಿದ್ದು, ಸರ್ವೇ ಮಾಡಿಸಿ ಆ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಬಿ.ವೀರಣ್ಣ, ಗೋಣೆಪ್ಪ, ಮಹಾಬಲೇಶ, ಎಚ್.ಮಂಜಪ್ಪ, ಎಂ.ನೀಲಪ್ಪ, ಶೈನಾಜ್ ಇತರರಿದ್ದರು.