ಬಳ್ಳಾರಿ : ತುಂಗಭದ್ರ ಜಲಾಶಯಕ್ಕೆ ಸಮಾನಾಂತರ ನವಿಲೆ ಜಲಾಶಯ ಕಾಮಗಾರಿಯನ್ನು ಸರ್ಕಾರ ತ್ವರಿತವಾಗಿ ಪ್ರಾರಂಭಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಆಗ್ರಹಿಸಿದರು.
ಬೆಳಗಾವಿಯ ವಿಧಾನಮಂಡಲದ ಅಧಿವೇಶನದಲ್ಲಿ ಮಾತನಾಡಿ, ನವಿಲೆ ಸಮಾನಾಂತರ ಜಲಾಶಯ ನಿರ್ಮಿಸುವುದರಿಂದ ಭವಿಷ್ಯದಲ್ಲಿ ನೀರಿನ ಸಮಸ್ಯೆ ತಪ್ಪಿಸಬಹುದು. ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಸಂಡೂರು ತಾಲೂಕಿನಲ್ಲಿ ಕುಡಿವ ನೀರಿನ ಕೆರೆ ತುಂಬಿಸುವ ಕೆಲಸ ತ್ವರಿತವಾಗಿ ಮಾಡಬೇಕಿದೆ. ಪಾವಗಡಕ್ಕೆ ಕುಡಿವ ನೀರನ್ನು ಪೂರೈಸಲಾಗುತ್ತದೆ. ಮಾರ್ಗಮಧ್ಯೆದಲ್ಲಿರುವ ಕೊಟ್ಟೂರಿಗೆ ನೀರು ಪೂರೈಸಲು ಸಾಧ್ಯವಾಗಿಲ್ಲ. ಅಲ್ಲದೆ, ನೀರು ನಿರ್ವಹಣೆ ಮತ್ತು ಸಂರಕ್ಷಣೆ ಕುರಿತು ಜನಸಾಮಾನ್ಯರಿಗೆ ಹಾಗೂ ರೈತರಿಗೆ ಜಾಗೃತಿ ಮೂಡಿಸಬೇಕಿದೆ. ಇಲ್ಲವಾದಲ್ಲಿ ಕೃಷಿ ಸಂಕಷ್ಟಕ್ಕೆ ಗುರಿಯಾಗಿ, ರೈತರು ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದರು.