ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಬಿ.ಸಿ.ಮಹಾಬಲೇಶ್ವರಪ್ಪ ಮಾತನಾಡಿದರು.  
ಬಳ್ಳಾರಿ

ಹೋರಾಟಗಾರರ ಇತಿಹಾಸ ದಾಖಲಿಸುವ ಕೆಲಸವಾಗಲಿ

ಸಂಡೂರು: ಜಗತ್ತನ್ನು ಮುನ್ನಡೆಸುವುದು ಭೌತಿಕ ಸಾಮರ್ಥ್ಯವಲ್ಲ ಬದಲಿಗೆ ಪ್ರಭಾವಶಾಲಿ ಆಲೋಚನೆಗಳು ಮತ್ತು ಉದಾತ್ತ ವಿಚಾರಗಳಿಂದ ಸಾಧ್ಯ. ಇದಕ್ಕೆ ಪೂರಕವಾಗಿ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಹಾಗೂ ಯುವ ಸಂಶೋಧಕರು ಹೊಸ ಆಲೋಚನಾ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಸಿ.ಮಹಾಬಲೇಶ್ವರಪ್ಪ ಹೇಳಿದರು.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರು ತ್ಯಾಗ, ಬಲಿದಾನ ನೀಡಿದ್ದಾರೆ. ಆದರೆ ಅನೇಕರನ್ನು ಇತಿಹಾಸದಲ್ಲಿ ಕಡೆಗಣಿಸಲಾಗಿದ್ದು, ಅವರ ಕೊಡುಗೆಗಳನ್ನು ನಾವು ಸದಾ ಸ್ಮರಿಸಬೇಕು. ಇತಿಹಾಸದ ಹೊಸ ಸಂಶೋಧಕರು ಅಂತಹ ಅಪ್ರತಿಮ ಹೋರಾಟಗಾರರ ಕೊಡುಗೆಗಳನ್ನು ದಾಖಲಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಎಚ್.ತಿಪ್ಪೇಸ್ವಾಮಿ ಮಾತನಾಡಿ, ಇತಿಹಾಸದ ಪುಟಗಳಲ್ಲಿ ರಾಜ, ಮಹಾರಾಜರು, ಸಾಮ್ರಾಜ್ಯಗಳ ಕುರಿತು ಅನೇಕರು ಬರೆದಿದ್ದಾರೆ. ಆದರೆ, ಸಮಾಜದಲ್ಲಿ ಶತಮಾನಗಳಿಂದ ತುಳಿತಕ್ಕೊಳಗಾದ ಸಮುದಾಯಗಳ ನೈಜ ಇತಿಹಾಸ ಇನ್ನೂ ದಾಖಲಾಗಬೇಕಾಗಿದೆ ಎಂದರು.

ಸಹ ಪ್ರಾಧ್ಯಾಪಕ ಡಾ.ಎಸ್.ಎಂ.ಶಶಿಧರ, ಡಾ.ಟಿ.ಎಸ್.ನರಸಿಂಹಮೂರ್ತಿ, ಡಾ.ಎಂ.ವಿರೂಪಾಕ್ಷಪ್ಪ, ಡಾ.ಮಲ್ಲಯ್ಯ, ಡಾ.ಗುಡ್ಡಪ್ಪ, ಶಿವಕುಮಾರ್ ಉಪಸ್ಥಿತರಿದ್ದರು.