ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಉದ್ಯೋಗ ಪಡೆದ ಅಭ್ಯರ್ಥಿಗಳಿಗೆ ಶಾಸಕ ಕೃಷ್ಣನಾಯ್ಕ ನೇಮಕಾತಿ ಪತ್ರ ನೀಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವೀ.ವಿ. ಸಂಘದ ಕಾರ್ಯದರ್ಶಿ ಅರವಿಂದ ಪಟೇಲ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮೋಹನ ರೆಡ್ಡಿ ಇತರರಿದ್ದರು. 
ಬಳ್ಳಾರಿ

ನಿರುದ್ಯೋಗಿಗಳು ಆರ್ಥಿಕ ಸ್ವಾವಲಂಬಿಗಳಾಗಲಿ

ಪ್ರಮುಖ ಮುಖ್ಯಾಂಶಗಳು

  • ಉದ್ಯೋಗ
  • ಮೇಳ
  • ಆಯೋಜನೆ
ಹೂವಿನಹಡಲಿ: ಗ್ರಾಮೀಣ ಭಾಗದ ಯುವಕ-ಯುವತಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜು ಬಯಲು ರಂಗಮಂದಿರದಲ್ಲಿ ಶಾಸಕ ಕೃಷ್ಣನಾಯ್ಕ ಅಭಿಮಾನಿ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ನಾತಕೋತ್ತರ ಪದವಿ ಪಡೆದ ಅನೇಕ ಯುವಕ, ಯುವತಿಯರು ಉದ್ಯೋಗ ದೊರಕದೆ ಹಳ್ಳಿಗಳಲ್ಲಿಯೇ ವಾಸವಾಗಿದ್ದಾರೆ.
ದೂರದ ಊರುಗಳಿಗೆ ತೆರಳಿ ಉದ್ಯೋಗ ಪಡೆಯಲಿಕ್ಕಾಗದೆ ಪರದಾಡುತ್ತಿರುವುದನ್ನು ಗಮನಿಸಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ತಾಲೂಕಿನ ಯುವಕ, ಯುವತಿಯರು ಉದ್ಯೋಗ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಈ ಉದ್ಯೋಗ ಮೇಳ ಬಡ ಮತ್ತು ಮಧ್ಯಮವರ್ಗದವರಿಗೆ ಅನುಕೂಲವಾಗಲಿದೆ ಎಂದರು.
ಪ್ರಾಚಾರ್ಯ ಎಸ್.ಎಸ್.ಪಾಟೀಲ ಮಾತನಾಡಿ, ಉದ್ಯೋಗ ಮೇಳಕ್ಕೆ 1,753 ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದು, 20 ಜನ ಅಂಗವಿಕಲರು ಸೇರಿದಂತೆ 500ಕ್ಕೂ ಹೆಚ್ಚು ಯುವಕ-ಯುವತಿಯರು ಉದ್ಯೋಗ ಪಡೆದುಕೊಂಡಿದ್ದಾರೆ. ಸುಮಾರು 100 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿವೆ ಎಂದು ಮಾಹಿತಿ ನೀಡಿದರು.
ವೀ.ವಿ. ಸಂಘದ ಕಾರ್ಯದರ್ಶಿ ಅರವಿಂದ ಪಟೇಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಮೋಹನ ರೆಡ್ಡಿ, ಉಪಾಧ್ಯಕ್ಷ ಹಣ್ಣಿ ಶಶಿಧರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪಿ., ಎಚ್.ಪೂಜಪ್ಪ, ಈಟಿ ಲಿಂಗರಾಜ, ಕೊಟೆಪ್ಪ, ಮುದುಕಪ್ಪ, ಮಂಜುನಾಥ ಜೈನ್ ಇತರರಿದ್ದರು.