ಸಿಂಧನೂರಿನ ರಾಗಲಪರ್ವಿ-ಬಳಗಾನೂರು ಕ್ರಾಸ್ ಬಳಿ ತಹಸೀಲ್ದಾರ್ ಅರುಣ್ ದೇಸಾಯಿಗೆ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿತು. ಸಂಘದ ರಾಜ್ಯ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಗಿ, ಜಿಲ್ಲಾಧ್ಯಕ್ಷ ಬಸವರಾಜ ಹಂಚಿನಾಳ, ತಾಲೂಕು ಅಧ್ಯಕ್ಷ ಶಿವನಗೌಡ ತಿಡಿಗೋಳ, ಪಾಧ್ಯಕ್ಷ ಯುಸೂಫ್‌ಸಾಬ್, ಗೌರವಾಧ್ಯಕ್ಷ ಅಣ್ಣಪ್ಪ, ವೀರೇಶ, ಖಾದರ್ ಇತರರಿದ್ದರು.
ಸಿಂಧನೂರು: ಖರೀದಿ ಕೇಂದ್ರಗಳಿಗೆ ಜೋಳ ಮಾರಾಟ ಮಾಡಿದ ರೈತರಿಗೆ ಕೂಡಲೇ ಹಣ ಪಾವತಿಸಬೇಕೆಂದು ಆಗ್ರಹಿಸಿ ರಾಗಲಪರ್ವಿ-ಬಳಗಾನೂರು ಕ್ರಾಸ್ ಬಳಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರಸ್ತೆ ಸಂಚಾರ ತಡೆ ನಡೆಸಲಾಯಿತು.
ಖರೀದಿ ಕೇಂದ್ರಗಳಿಗೆ ಜೋಳ ಮಾರಾಟ ಮಾಡಿದ ರೈತರು ಚಾತಕ ಪಕ್ಷಿಯಂತೆ ಕಾಯುತ್ತ ಕುಳಿತಿದ್ದು, ಇದುವರೆಗೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಮುಂಗಾರು ಹಂಗಾಮು ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಹಣಕಾಸಿನ ತೊಂದರೆ ಎದುರಿಸುತ್ತಿದ್ದಾರೆ. ಖಾಸಗಿ ಲೇವಾದೇವಿಗಾರರ ಬಳಿ ಅಲೆಯುವಂತಾಗಿದೆ.
ಫಸಲು ಮಾರಾಟ ಮಾಡಿ 3 ತಿಂಗಳು ಕಳೆದರೂ ರೈತರ ಕೈಗೆ ನಯಾ ಪೈಸೆ ಹಣ ದೊರೆತಿಲ್ಲ. ಮುಂಗಾರು ಹಂಗಾಮಿನಲ್ಲಿ ಮಾ.14 ರಿಂದ ಮಾ.24 ರೊಳಗೆ ಖರೀದಿ ಕೇಂದ್ರಗಳಿಗೆ ಜೋಳ, ರಾಗಿ, ಮೆಕ್ಕೆಜೋಳ ಮಾರಾಟ ಮಾಡಿದ್ದು, ರಾಜ್ಯಕ್ಕೆ ಕೇವಲ 34 ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ ಸಿಂಧನೂರು ತಾಲೂಕಿನ ಬೆರಳೆಣಿಕೆ ಫಲಾನುಭವಿಗಳಿಗೆ ಹಣ ಜಮಾ ಆಗಿದೆ. ಉಳಿದ ಬಹುತೇಕ ರೈತರ ಖಾತೆಗೆ ಹಣ ಬಂದಿಲ್ಲ. ರಾಯಚೂರು ಜಿಲ್ಲೆಯಲ್ಲೇ ಮುಂಗಾರು ಹಂಗಾಮಿನಲ್ಲಿ ಸರ್ಕಾರ ರೈತರ ಖಾತೆಗೆ 304 ಕೋಟಿ ರೂ. ಪಾವತಿಸಬೇಕಿದೆ. ಜೋಳ ಮಾರಾಟ ಮಾಡಿದ ಎಲ್ಲ ರೈತರ ಖಾತೆಗಳಿಗೆ ಕೂಡಲೇ ಹಣ ಜಮಾ ಮಾಡಬೇಕೆಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಅರುಣ್ ದೇಸಾಯಿಗೆ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಗಿ, ಜಿಲ್ಲಾಧ್ಯಕ್ಷ ಬಸವರಾಜ ಹಂಚಿನಾಳ, ತಾಲೂಕು ಅಧ್ಯಕ್ಷ ಶಿವನಗೌಡ ತಿಡಿಗೋಳ, ಉಪಾಧ್ಯಕ್ಷ ಯುಸೂಫ್‌ಸಾಬ್, ಗೌರವಾಧ್ಯಕ್ಷ ಅಣ್ಣಪ್ಪ, ವೀರೇಶ, ಖಾದರ್, ಚನ್ನನಗೌಡ, ಚನ್ನಯ್ಯ, ಚನ್ನಬಸವ ರಾಗಲಪರ್ವಿ, ಬಸಣ್ಣ ಪುಲದಿನ್ನಿ, ನಾರಾಯಣಪ್ಪ, ಮಲ್ಲಿಕಾರ್ಜುನ ಇತರರಿದ್ದರು.