ಹಟ್ಟಿಚಿನ್ನದಗಣಿ ಕಂಪನಿಯ ಮುಖ್ಯದ್ವಾರದ ಮುಂದೆ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು. ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ಆನ್ವರಿ, ಕಾರ್ಯದರ್ಶಿಗಳಾದ ವೆಂಕೋಬ್ ಮಿಯ್ಯಪುರ, ಗೌಸ್ ಮಿಯಾ, ಜಮದಗ್ನಿ, ರಮೇಶ ಬಾಬು, ನಾಗರಾಜ, ಹನೀಫ್, ಸಿದ್ದಪ್ಪ ಮುಂಡರಗಿ ಇತರರಿದ್ದರು. 
ಬಳ್ಳಾರಿ

ಹೊಸ ವೇತನ ಒಪ್ಪಂದ ಅನುಷ್ಠಾನಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಸಂಘ
  • ಧರಣಿ
  • ಆಡಳಿತ ಮಂಡಳಿ
* ಹಟ್ಟಿಚಿನ್ನದಗಣಿ ಕಂಪನಿ ಮುಂದೆ ಸಿಬ್ಬಂದಿ
ಹಟ್ಟಿಚಿನ್ನದಗಣಿ: ಕಾರ್ಮಿಕರ ನ್ಯಾಯಯುತ ಬೇಡಿಕೆ ಈಡೇರಿಸದ ಆಡಳಿತ ಮಂಡಳಿ ನಡೆ ಖಂಡಿಸಿ ಹಟ್ಟಿ ಚಿನ್ನದಗಣಿ ಸಿಬ್ಬಂದಿ ಮತ್ತು ಕಾರ್ಮಿಕರ ಸಂಘ ಸೋಮವಾರ ಕಂಪನಿ ಮುಖ್ಯದ್ವಾರದ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಶಫಿ ಮಾತನಾಡಿ, ಅನಾರೋಗ್ಯಪೀಡಿತ ಕಾರ್ಮಿಕರಿಗೆ ಮೆಡಿಕಲ್ ಅನ್‌ಫಿಟ್ ಯೋಜನೆಯನ್ನು ತಕ್ಷಣ ಜಾರಿಗೊಳಿಸಬೇಕು. ಹೊಸ ವೇತನ ಒಪ್ಪಂದ ಅನುಷ್ಠಾನಗೊಳಿಸಬೇಕು. ಸ್ಥಳೀಯ ವಿದ್ಯಾವಂತ ಯುವಕರಿಗೆ ಕ್ಯಾಜುವಲ್ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವ ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಬಾಕಿ ಇರುವ ಎಕ್ಸ್‌ಗ್ರೇಷಿಯಾ, ಪಿಎಲ್‌ಐಬಿ, ಬೋನಸ್, ಎಚ್‌ಆರ್‌ಎ ಸೇರಿದಂತೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ಕೂಡಲೇ ವಿತರಿಸಬೇಕು. ಉತ್ಪಾದನೆಯಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರುತ್ತಿರುವುದು ಬೇಸರದ ಸಂಗತಿ. ಹಟ್ಟಿ ಚಿನ್ನದ ಗಣಿ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಬದಲು ಹೊರಗುತ್ತಿಗೆ ವ್ಯವಸ್ಥೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಮಿಕರ ಹಕ್ಕುಗಳು, ಸಾಮಾಜಿಕ ಭದ್ರತೆ, ಉದ್ಯೋಗ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳಿಗೆ ಸಂಬಂಧಿಸಿದ ಬೇಡಿಕೆಗಳ ಕುರಿತು ಹಲವಾರು ಬಾರಿ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದರೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಧರಣಿ ಅನಿವಾರ್ಯವಾಗಿದೆ.
ಕೆಲಸದಿಂದ ವಜಾಗೊಂಡಿದ್ದ 9 ಕಾರ್ಮಿಕರ ಪೈಕಿ 4 ಜನರಿಗೆ ಮರು ನೇಮಕಾತಿ ನೀಡಲಾಗಿದ್ದು, ಉಳಿದ ಕಾರ್ಮಿಕರಿಗೂ ನ್ಯಾಯ ಒದಗಿಸಬೇಕು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಬು ಸಾಗರ್, ಮುನೀರುದ್ದೀನ್, ಹನುಮಂತಗೌಡ, ಗುಂಡಪ್ಪಗೌಡ ಇತರರಿದ್ದರು.