ಕುರುಗೋಡು ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಅನುದಾನ ದುರುಪಯೋಗ ಕುರಿತು ತನಿಖೆಗೆ ಆಗ್ರಹಿಸಿ ತಹಸೀಲ್ದಾರ್ ನರಸಪ್ಪಗೆ ಬಿಜೆಪಿ ಮಂಡಲದಿಂದ ಮನವಿ ಸಲ್ಲಿಸಲಾಯಿತು.
ಕುರುಗೋಡು: ತಾಲೂಕಿನ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅನುದಾನ ದುರುಪಯೋಗ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ಮಂಡಲದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನರಸಪ್ಪಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಮಾತನಾಡಿ, ತಾಲೂಕಿನಲ್ಲಿ 2021-2022 ರಿಂದ 2025-2026ನೇ ಸಾಲಿನಲ್ಲಿ ಕೈಗೊಂಡಿರುವ ಕಾಮಗಾರಿ ಕಳಪೆಯಾಗಿವೆ. ಕೆಲವೆಡೆ ದಾಖಲೆಯಲ್ಲಿ ಮಾತ್ರ ಕಾಮಗಾರಿ ನಡೆದಿದೆ. ಈ ಬಗ್ಗೆ ಮಾಹಿತಿಹಕ್ಕು ಕಾಯ್ದೆಯಡಿ ಪೂರಕ ದಾಖಲೆ ಕೇಳಿದರೂ ನೀಡುತ್ತಿಲ್ಲ. ಜಿಪಂ ಸಿಇಒ ಹಾಗೂ ರಾಜ್ಯ ಹಣಕಾಸು ಯೋಜನೆ ಸಂಬಂಧಿತ ಅಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಥವಾ ಉನ್ನತ ಮಟ್ಟದ ಅಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ಶೀಘ್ರ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿಗಳಾದ ತಿಪ್ಪೇರುದ್ರ, ನಟರಾಜ್, ಸಿದ್ದಮ್ಮನಹಳ್ಳಿ ಬಸವರಾಜು, ಕಿರಾಣಿ ಬಾಬು, ಲತಾ, ವಿದ್ಯಾ, ವೀರಭದ್ರಗೌಡ , ನೀಲಗಲು ಬಸವರಾಜು, ರವೀಂದ್ರ ರೆಡ್ಡಿ, ಪುರುಷೋತ್ತಮ್, ಸುರೇಶ್, ಲಕ್ಷ್ಮಣ, ಇತರರಿದ್ದರು.