- ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹ
- ಭಕ್ತರ ನಂಬಿಕೆಗೆ ಮಾಡಿದ ದ್ರೋಹ
ಬಳ್ಳಾರಿ : ಅಯೋಧ್ಯೆಯ ರಾಮಮಂದಿರ ದೇಣಿಗೆ ಹಣ ದುರ್ಬಳಕೆ ಆರೋಪದ ಪ್ರಕರಣದ ತನಿಖೆಯನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನಡೆಯಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಇದಲ್ಲದೇ, ಸುಪ್ರೀಂ ಕೋರ್ಟ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ರಾಮ ಮಂದಿರಕ್ಕೆ ಭಕ್ತರು ಅಪಾರ ನಂಬಿಕೆಯಿಂದ ನೀಡಿರುವ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ದೇಶದಾದ್ಯಂತ ಆತಂಕ ಮೂಡಿಸಿದೆ. ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಈಗಾಗಲೇ ಎಂಟು ಮಂದಿಯನ್ನು ಬಂಧಿಸಿರುವುದು ವಿಷಯದ ಗಂಭೀರತೆಯನ್ನು ತೋರಿಸುತ್ತದೆ ಎಂದರು.
ಪ್ರಾಥಮಿಕ ತನಿಖೆಯ ಪ್ರಕಾರ, 2025ರ ಏಪ್ರಿಲ್‌ನಿಂದ 2026ರ ಫೆಬ್ರವರಿವರೆಗೆ ದೇವಸ್ಥಾನಕ್ಕೆ ಬಂದ ದೇಣಿಗೆಯಲ್ಲಿ ನೂರಾರು ಕೋಟಿ ಮೊತ್ತದ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಕಳವು, ನಂಬಿಕೆ ದ್ರೋಹ, ವಂಚನೆ ಹಾಗೂ ಕ್ರಿಮಿನಲ್ ಸಂಚು ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿದೆ ಎಂದರು. ಇದು ಕೇವಲ ಹಣದ ಹಗರಣವಲ್ಲ, ಕೋಟ್ಯಂತರ ಭಕ್ತರ ನಂಬಿಕೆಗೆ ಮಾಡಿದ ದ್ರೋಹ. ಆದ್ದರಿಂದ ಕೇವಲ ಎಸ್‌ಐಟಿ ತನಿಖೆ ಸಾಕಾಗದು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸಮಗ್ರ ತನಿಖೆ ನಡೆಯಬೇಕು. ತಪ್ಪಿತಸ್ತರು ಯಾರೇ ಆಗಿದ್ದರೂ ಕಾನೂನಿನ ಮುಂದೆ ಉತ್ತರಿಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಪ್ರಕರಣದ ಕುರಿತು ಮೌನ ವಹಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ರಾಮನ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಈ ಪ್ರಕರಣದ ಬಗ್ಗೆ ದೇಶದ ಜನರಿಗೆ ಸ್ಪಷ್ಟನೆ ನೀಡಬೇಕು. ನೈತಿಕ ಹೊಣೆಗಾರಿಕೆ ಇದ್ದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಮೇಯರ್ ಪಿ. ಗಾದೆಪ್ಪ, ಮುಖಂಡರಾದ ಎಲ್.ಮಾರಣ್ಣ, ವೆಂಕಟೇಶ್ ಹೆಗಡೆ ಇದ್ದರು.