ಸಂಡೂರಿನಲ್ಲಿ ಗ್ರೇಡ್-2 ತಹಸೀಲ್ದಾರ್ ಸುಧಾ ಅರಮನೆಗೆ ದೇವದಾಸಿ ಮಹಿಳಾ ವಿಮೋಚನಾ ಸಂಘದಿಂದ ಮನವಿ ಸಲ್ಲಿಸಲಾಯಿತು.
ಸಂಡೂರು: ವಿಮುಕ್ತ ದೇವದಾಸಿಯರು ಮತ್ತು ಅವರ ಮೂರು ತಲೆಮಾರಿನ ಕುಟುಂಬ ಸದಸ್ಯರ ಗಣತಿ ಕಾರ್ಯ ಅಪೂರ್ಣವಾಗಿದೆ ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ತಾಲೂಕು ದೇವದಾಸಿ ಮಹಿಳಾ ವಿಮೋಚನಾ ಸಂಘದಿಂದ ಗ್ರೇಡ್-2 ತಹಸೀಲ್ದಾರ್ ಸುಧಾ ಅರಮನೆಗೆ ಮನವಿ ಸಲ್ಲಿಸಿ ಬುಧವಾರ ಮಾತನಾಡಿದರು. 2007-08ರ ಗಣತಿ ಅಸಮರ್ಪಕವಾಗಿತ್ತು, ಆದರೂ, ಸುಮಾರು 46800 ಮಹಿಳೆಯರನ್ನು ಗುರುತಿಸಲಾಗಿತ್ತು. ಆಗ 1982 ಅಥವಾ ಆ ನಂತರ ದೇವದಾಸಿಯಾಗಿದ್ದ ಸುಮಾರು 20ಸಾವಿರಕ್ಕೂ ಅಧಿಕ ಮಹಿಳೆಯರನ್ನು ಆ ಗಣತಿ ಪರಿಗಣಿಸಿರಲಿಲ್ಲ. ಆದ್ದರಿಂದ ನಾವು ಆಗ ಮರುಗಣತಿ ಮಾಡುವಂತೆ ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು.
2025ರಲ್ಲಿ ಸರ್ಕಾರ ಮರುಗಣತಿಗೆ ಆದೇಶಿಸಿದ್ದು, ಗಣತಿಯ ಹೊರಗೆ ಇರುವವರ ಕುಟುಂಬವನ್ನು ಪರಿಗಣಿಸಬೇಕು. ನಮ್ಮ ಬೇಡಿಕೆಯನ್ನು ಸರ್ಕಾರ ಪರಿಗಣಿಸಿಲ್ಲ. ಆದರೂ, ನಾವು ಈ ಸಮೀಕ್ಷೆಯನ್ನು ಸ್ವಾಗತ ಮಾಡುತ್ತೇವೆ. ಬಾಕಿ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಪಿಂಚಣಿಯನ್ನು ಆರು ಸಾವಿರ ರೂ.ಗೆ ಹೆಚ್ಚಳ ಮಾಡಬೇಕು. 2007ರಲ್ಲಿ ಸರ್ಕಾರವೇ ಸರ್ವೇ ಮಾಡಿದ್ದ ವಿಮುಕ್ತ ದೇವದಾಸಿಯರನ್ನು ವಯೋಮಿತಿ ಕಾರಣಕ್ಕೆ ಸಮೀಕ್ಷೆಯಿಂದ ಹೊರಗೆ ಇಟ್ಟಿರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.