ವಿ.ಎಸ್.ಉಗ್ರಪ್ಪ 
ಬಳ್ಳಾರಿ

ಅರಸು ಅವರಿಗೆ ಭಾರತ ರತ್ನ ಘೋಷಿಸಲಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ಉಗ್ರಪ್ಪ ಆಗ್ರಹ

ಬಳ್ಳಾರಿ :

ರಾಜ್ಯ ಕಂಡ ಅಪರೂಪದ ನಾಯಕ, ಮಾಜಿ ಸಿಎಂ ಡಿ.ದೇವರಾಜು ಅರಸು ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಲಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.

ನಗರದ ಅತಿಥಿಗೃಹದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಳ್ಳಿಯಲ್ಲಿರುವ ಅರಸು ಅವರ ಸಮಾಧಿ ಸ್ಥಳ ಅಭಿವೃದ್ಧಿಯಾಗಿಲ್ಲ. ಅಲ್ಲಿನ ಸ್ಮಾರಕ ಕಟ್ಟಡವೂ ದುಸ್ಥಿತಿಗೆ ತಲುಪಿದೆ. ಆದ್ದರಿಂದ, ರಾಜ್ಯ ಸರ್ಕಾರ ಅಭಿವೃದ್ಧಿಗೊಳಿಸಿ ಸ್ಮಾರಕ ಸ್ಥಳ ಎಂದು ಘೋಷಿಸಬೇಕು ಎಂದರು.

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರು 40 ಸಾವಿರ ಕೋಟಿ ರೂ. ಗೂ ಅಧಿಕ ಮೊತ್ತದ ರಫೇಲ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ರಾಮನ ಹೆಸರಿನಲ್ಲಿ ಇಟ್ಟಿಗೆ ಯಾತ್ರೆ, ರಥಯಾತ್ರೆ ನಡೆಸಿ ಹಣ ಲೂಟಿ ಮಾಡಲಾಗಿದೆ ಎಂದು ದೂರಿದರು. ರಾಮಮಂದಿರ ಟ್ರಸ್ಟ್ ನಿರ್ಮಾಣದಲ್ಲಿಯೂ ಅಕ್ರಮ ನಡೆದಿದೆ. ಇದರ ಹಿಂದೆ ಬಿಜೆಪಿ ಕೈವಾಡವಿದೆ ಎಂದರು.

ಸದನಕ್ಕೆ ತೆರಳಿದ ಕೂಡಲೇ ಧರಣಿ ನಡೆಸುವುದು ಜನ ಮೆಚ್ಚುವ ಕ್ರಮವಲ್ಲ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಚರ್ಚೆಗೆ ಬನ್ನಿ. ಸಮರ್ಪಕ ಉತ್ತರ ಸಿಗದಿದ್ದರೆ ನಂತರ ಹೋರಾಟ ನಡೆಸಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿಯ ಹಲವು ನಾಯಕರ ವಿರುದ್ಧ ವಿರುದ್ಧವೂ ಹಲವು ಗಂಭೀರ ಪ್ರಕರಣಗಳಿವೆ ಎಂದು ವಾಗ್ದಳಿ ನಡೆಸಿದರು. ಮುಖಂಡರಾದ ಕಲ್ಲುಕಂಭ ಪಂಪಾಪತಿ, ಅನಿಲ್ ಇದ್ದರು.