ಕಂಪ್ಲಿಯಲ್ಲಿ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ ತಾಲೂಕು ಪೇಂಟರ್ಸ್‌ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಮಾನಪ್ಪ ಚಾಲನೆ ನೀಡಿದರು.  
ಬಳ್ಳಾರಿ

ಕಾರ್ಮಿಕ ಸ್ನೇಹಿ ಯೋಜನೆಗಳು ಅನುಷ್ಠಾನಗೊಳ್ಳಲಿ

ಅಶೋಕ್ ಕುಮಾರ್ ಎನ್
ಕಂಪ್ಲಿ: ಅರ್ಹ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ನಿಗಾ ವಹಿಸಬೇಕಿದೆ ಎಂದು ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ ಕಾರ್ಯದರ್ಶಿ ಸತೀಶ್ ಹೇಳಿದರು.
ಪಟ್ಟಣದ 4ನೇ ವಾರ್ಡ್ ಶಾಲೆ ಬಳಿಯ ಅಂಬೇಡ್ಕರ್ ಭವನದಲ್ಲಿ ತಾಲೂಕು ಪೇಂಟರ್ಸ್‌ ಕಾರ್ಮಿಕರ ಸಂಘ, ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘಟನೆ ಹಾಗೂ ಕರ್ನಾಟಕ ಶ್ರಮಿಕ ಶಕ್ತಿಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಮಿಕರು ನಿಜಕ್ಕೂ ಸಂಕಷ್ಟದಲ್ಲಿದ್ದು, ಆರೋಗ್ಯ ಹಿತಾಸಕ್ತಿ ರಕ್ಷಿಸುವ ಕಾರ್ಮಿಕ ಸ್ನೇಹಿ ನೀತಿ, ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ ಎಂದರು.
ತಾಲೂಕು ಪೇಂಟರ್ಸ್‌ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಮಾನಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತಾಲೂಕಿನಲ್ಲಿ ಪೇಂಟರ್ಸ್‌ ಕುಟುಂಬಗಳಿಗೆ ನಿವೇಶನ, ವಸತಿ ಸೌಲಭ್ಯ, ಸಮುದಾಯ ಭವನ ಸೇರಿದಂತೆ ನಾನಾ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮುಂದಾಗಬೇಕೆಂದರು.
ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಕರಿಯಪ್ಪ ಗುಡಿಮನಿ, ಜಿಲ್ಲಾಧ್ಯಕ್ಷ ನೀಲಪ್ಪ ಪೇಂಟರ್, ಉಪಾಧ್ಯಕ್ಷ ಬಸವರಾಜ, ಕರ್ನಾಟಕ ಶ್ರಮಿಕ ಶಕ್ತಿ ಕಾರ್ಯದರ್ಶಿಗಳಾದ ಚನ್ನಮ್ಮ, ಚನ್ನಮಲ್ಲಮ್ಮ, ತಾಲೂಕು ಪೇಂಟರ್ಸ್‌ ಕಾರ್ಮಿಕರ ಸಂಘದ ಅಧ್ಯಕ್ಷ ಮಾರುತಿ, ರಾಮಕೃಷ್ಣ ಚಿತ್ರಗಾರ, ಹಮಾಲರ ಸಂಘದ ತಾಲೂಕು ಅಧ್ಯಕ್ಷ ಮೊಹಿದ್ದೀನ್, ಸಿಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ, ಈ.ಧನಂಜಯ ಇತರರಿದ್ದರು.