ಬಳ್ಳಾರಿಯ ಪ್ರಾದೇಶಿಕ ಅರಣ್ಯ ವಿಭಾಗ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಗ್ರೀನ್ ಮಾರ್ಚ್ ಜಾಥಾಕ್ಕೆ ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಚಾಲನೆ ನೀಡಿದರು. ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್.ಬಸವರಾಜ ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಕೆ. ಗಿರೀಶ್ ಕುಮಾರ್ ಇದ್ದರು. 
ಬಳ್ಳಾರಿ

ಗಿಡ ಬೆಳೆಸುವುದು ಹವ್ಯಾಸವಾಗಲಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸಾಂಕೇತಿಕ ಆಚರಣೆಯಾಗಬಾರದು.
  • ದೈನಂದಿನ ಹವ್ಯಾಸವಾಗಬೇಕು
ಬಳ್ಳಾರಿ : ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುತ್ತೇವೆಯೋ, ಅಷ್ಟು ಹಿತಕರವಾದ ವಾತಾವರಣ ಮುಂದಿನ ಪೀಳಿಗೆಗೆ ನೀಡಬಹುದು ಎಂದು ಎಸ್ಪಿ ಸುಮನ್ ಡಿ.ಪನ್ನೇಕರ್ ಹೇಳಿದರು.
ನಗರದ ರೇಡಿಯೋ ಪಾರ್ಕ್‌ನಲ್ಲಿನ ಪ್ರಾದೇಶಿಕ ಅರಣ್ಯ ವಿಭಾಗದ ವತಿಯಿಂದ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ವನಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಗ್ರೀನ್ ಮಾರ್ಚ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬ ನಾಗರಿಕನೂ ಕೇವಲ ಸಸಿ ನೆಡುವುದಷ್ಟೇ ಅಲ್ಲದೆ, ಅದನ್ನು ಹೆಮ್ಮರವಾಗಿಸುವವರೆಗೆ ಪೋಷಿಸುವ ಜವಾಬ್ದಾರಿ ಹೊರಬೇಕು. ಪರಿಸರ ಸಂರಕ್ಷಣೆ, ಮರಗಳನ್ನು ಬೆಳೆಸುವುದು ಕೇವಲ ವರ್ಷಕ್ಕೊಮ್ಮೆ ಮಾಡುವ ಸಾಂಕೇತಿಕ ಆಚರಣೆಯಾಗಬಾರದು. ಬದಲಿಗೆ ಅದು ನಮ್ಮ ದೈನಂದಿನ ಹವ್ಯಾಸವಾಗಬೇಕು ಎಂದರು.
ಗಿಡಗಳನ್ನು ನೆಡುವ ಪ್ರಕ್ರಿಯೆಯಲ್ಲಿ ಮಕ್ಕಳ ಪಾತ್ರ ದೊಡ್ಡದಿದೆ. ಮಕ್ಕಳ ಬೆಳವಣಿಗೆಯ ಜೊತೆ ಜೊತೆಗೆ ಅವರು ನೆಟ್ಟ ಸಸಿಗಳು ಬೆಳೆಯುವುದನ್ನು ನೋಡುವುದೇ ಒಂದು ಸಂಭ್ರಮ. ನಮ್ಮ ಶಾಲಾ ದಿನಗಳಲ್ಲಿ ಸಸಿಗಳನ್ನು ನೆಟ್ಟು, ಅವುಗಳ ಬೆಳವಣಿಗೆಯನ್ನು ಪ್ರಾಯೋಗಿಕವಾಗಿ ದಾಖಲಿಸುವ ಚಟುವಟಿಕೆಗಳಿದ್ದವು. ಇಂತಹ ಹವ್ಯಾಸಗಳು ಇಂದಿನ ಮಕ್ಕಳಿಗೂ ಅತ್ಯಗತ್ಯ ಎಂದು ಹೇಳಿದರು.
ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿ, ಪರಿಸರಯಿದ್ದರೆ ನಾವು ಇರುತ್ತೇವೆ, ಪರಿಸರ ಇಲ್ಲದಿದ್ದರೆ ನಮ್ಮ ಅಸ್ತಿತ್ವವೇ ಇರಲ್ಲ, ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿ ಸಾಗಿದರೆ ಮಾತ್ರ ನಮ್ಮ ಭವಿಷ್ಯ ಚೆನ್ನಾಗಿರಲು ಸಾಧ್ಯ. ಇದಕ್ಕಾಗಿ ಯುವ ಪೀಳಿಗೆಯು ಅರಣ್ಯೀಕರಣ, ಸಾಮಾಜಿಕ ಅರಣ್ಯೀಕರಣ ಹಾಗೂ ಸಸಿ ನೆಡುವ ಕಾರ್ಯಕ್ರಮಗಳಿಗೆ ನಿರಂತರ ಬೆಂಬಲ ನೀಡಬೇಕು ಎಂದರು.
ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್.ಬಸವರಾಜ ಮಾತನಾಡಿ, ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿದರೂ, ದೇಶಾದ್ಯಂತ ಸಂಪೂರ್ಣವಾಗಿ ಮಳೆಗಾಲ ಆರಂಭವಾಗುವುದು ಜೂನ್ ಅಂತ್ಯಕ್ಕೆ. ಈ ಹಿನ್ನೆಲೆ ಗಿಡಗಳನ್ನು ನೆಟ್ಟು ಪೋಷಿಸಲು ಜುಲೈ ಮೊದಲ ವಾರ ಅತ್ಯಂತ ಸೂಕ್ತವಾದ ಸಮಯವೆಂದು ಪರಿಗಣಿಸಿ ಈ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದರು.
ಬಳಿಕ ಗ್ರೀನ್ ಮಾರ್ಚ್ (ಪರಿಸರ ಜಾಥಾ) ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಜಾಥಾವು ಕಚೇರಿ ಆವರಣದಿಂದ ಆರಂಭಗೊಂಡು, ಟಿ.ಬಿ. ಸಾನಿಟೋರಿಯಂ ಆವರಣದಲ್ಲಿ ಅಂತ್ಯಗೊಂಡಿತು. ಬಳಿಕ ಅಲ್ಲಿ ಸಸಿಗಳನ್ನು ನೆಡಲಾಯಿತು. ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಯ ಸಂಕಲ್ಪ ಮಾಡಲಾಯಿತು ಹಾಗೂ ಜಾಥದಲ್ಲಿ ಭಾಗವಹಿಸಿದವರಿಗೆ ಸಸಿಗಳನ್ನು ವಿತರಿಸಲಾಯಿತು.
===