ಹೂವಿನಹಡಗಲಿ: ಪಿಯು ಉಪನ್ಯಾಸಕರಿಗೆ ಪ್ರೌಢಶಾಲೆಗಳಿಗೆ ಸ್ಥಾನಪಲ್ಲಟಗೊಳಿಸುವ ಸರ್ಕಾರದ ಕ್ರಮ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನೇರ ದಾಳಿ ಮಾಡಿದಂತೆ ಎಂದು ಪ್ರಾಚಾರ್ಯರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೋರಿ ಹಾಲೇಶ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗಳಲ್ಲಿ ಪಾಠ ಮಾಡಲು ನಿಯೋಜನೆ ಮಾಡುತ್ತಿರುವುದು ರಾಷ್ಟ್ರೀಯ ಶಾಲಾ ಶಿಕ್ಷಣ ಪಠ್ಯಕ್ರಮದ ಚೌಕಟ್ಟಿನ ಮೂಲ ಆಶಯಗಳಿಗೆ ವಿರುದ್ಧವಾಗಿದೆ.
ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರಿ ಪಿಯು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಸಮರ್ಪಕವಾಗಿ ಬೋಧನೆ ಮಾಡುತ್ತಿರುವ ಉಪನ್ಯಾಸಕರಿಗೆ ಹೆಚ್ಚುವರಿಯಾಗಿ ಪ್ರೌಢಶಾಲೆಗಳ ಕಾರ್ಯಭಾರವನ್ನು ಏರಿಸಲಾಗುತ್ತಿದೆ. ಇದು ಅವರ ಭವಿಷ್ಯದ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ.
ಪಿಯು ಉಪನ್ಯಾಸಕರಿಗೆ ಹಿಂಬಡ್ತಿ ನೀಡುವುದು ಸರಿಯಲ್ಲ. ಈ ಕುರಿತು ಜುಲೈ ಮೊದಲವಾರದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ತಿಳಿಸಿದರು. ಸಂಘದ ತಾಲೂಕು ಅಧ್ಯಕ್ಷ ಬಸೆಟ್ಟಿ ಪ್ರಕಾಶ, ತಾಲೂಕು ಕಾರ್ಯದರ್ಶಿ ಬಿ.ವಿರೂಪಾಕ್ಷಪ್ಪ, ಖಜಾಂಚಿ ಎಂ.ಶಿವಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಜೆ.ಪ್ರದೀಪ, ಕಾರ್ಯದರ್ಶಿ ಕಲ್ಲನಗೌಡ್ರು ಪ್ರಕಾಶ ಇತರರಿದ್ದರು.