ಕೂಡ್ಲಿಗಿ ಶ್ರೀಮತಿ ಅಂಗಡಿ ವೀರಮ್ಮ, ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಭೂದಾನಿಗಳ ವಂಶಸ್ಥ ವೀರೇಶ್ ಅಂಗಡಿ, ಪ್ರಾಚಾರ್ಯ ಷಣ್ಮುಖನಗೌಡ ಸಂಕನಾಳ್, ಪ್ರಾಧ್ಯಾಪಕರಾದ ಡಾ.ಜ್ಯೋತಿ, ದೈಹಿಕಶಿಕ್ಷಣ ನಿರ್ದೇಶಕ ಜಿ.ಗುರುಬಸವರಾಜ ಇತರರಿದ್ದರು.
ಓದಿನೊಂದಿಗೆ ಸಂಸ್ಕಾರ ಕಲಿಯಿರಿ
ಕೂಡ್ಲಿಗಿ: ಯಶಸ್ವಿ ಕುಟುಂಬದ ಹಿಂದೆ ಹೆಣ್ಣಿನ ಪಾತ್ರ ಬಹು ಮುಖ್ಯವಾಗಿರುತ್ತದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ, ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಸ್ಟ್ರೀಯ ಮಹಿಳಾ ದಿನ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಟುಂಬ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಅಲ್ಲಿ ಹೆಣ್ಣಿನ ಸೇವೆ, ತ್ಯಾಗ ಪ್ರಮುಖವಾಗಿರುತ್ತದೆ. ಇಡೀ ಮನೆಯನ್ನು ಜವಾಬ್ದಾರಿಯಿಂದ ನಡೆಸುವ ಶಕ್ತಿ ಹೆಣ್ಣಿಗೆ ಮಾತ್ರ ಇದೆ ಎಂದರು.
ವಿದ್ಯಾರ್ಥಿನಿಯರು ಓದಿನ ಜತೆ ಸಂಸ್ಕಾರ ಕಲಿಯುವುದು ಮುಖ್ಯ. ಸರಿಯಾದ ನಡತೆಯಿಂದ ಮಾತ್ರ ಮಹಿಳೆ ಯಶಸ್ವಿಯಾಗಲು ಸಾಧ್ಯ. ಇತ್ತೀಚೆಗೆ ಶಾಲಾ, ಕಾಲೇಜು, ಗ್ರಾಮೀಣ ಪ್ರದೇಶಗಳಲ್ಲಿ ಗಾಂಜಾ, ಆಫೀಮುನಂತಹ ಮಾದಕ ದ್ರವ್ಯಗಳ ಮಾರಾಟ ಹೆಚ್ಚಾಗಿದೆ. ಪದವಿ ಕಾಲೇಜಿನಲ್ಲಿ ಅಗತ್ಯ ಕೊಠಡಿಗಳು, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಿ ಎಂದರು.
ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಭೂದಾನಿಗಳ ವಂಶಸ್ಥ ವೀರೇಶ್ ಅಂಗಡಿ, ಪ್ರಾಚಾರ್ಯ ಷಣ್ಮುಖನಗೌಡ ಸಂಕನಾಳ್, ಪಪಂ ಮಾಜಿ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ಸೂಲಗಿತ್ತಿ ವೀರಮ್ಮ, ಪ್ರಾಧ್ಯಾಪಕಿ ಡಾ.ಜ್ಯೋತಿ, ದೈಹಿಕ ಶಿಕ್ಷಣ ನಿರ್ದೇಶಕ ಜಿ.ಗುರುಬಸವರಾಜ, ಅಜೀಂ ಪ್ರೇಮ್ ಜೀ ಫೌಂಡೇಶನ್‌ನ ಸೌಭಾಗ್ಯಲಕ್ಷ್ಮೀ, ಡಾ.ಕಾವ್ಯಾ, ಟಿ.ಉಮೇಶ್ ಇತರರಿದ್ದರು.