ಸಿ.ಟಿ. ರವಿ 
ಬಳ್ಳಾರಿ

ಮೋದಿ ಸುದೀರ್ಘ ಅವಧಿಯ ದಾಖಲೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಕಾಂಗ್ರೆಸ್ ಸರ್ಕಾರದ ವೈಫಲ್ಯ
  • ಪರ್ಯಾಯ ಇಂಧನ ಕ್ಷೇತ್ರಕ್ಕೆ ಶಕ್ತಿ ತುಂಬಿದೆ
ಬಳ್ಳಾರಿ : ಒಂದು ಕಾಲದಲ್ಲಿ ತೀವ್ರ ಆರ್ಥಿಕ ಸ್ಥಿತಿಯಿಂದ ಬಳಲುತ್ತಿದ್ದ ಭಾರತವನ್ನು ಮೇಲೆತ್ತುವಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರಮಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದಲ್ಲದೇ, ಮೋದಿ ದೇಶದಲ್ಲಿ ಸುದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಮೋದಿ ಅವರು ಜನರ ವಿಶ್ವಾಸ ಗಳಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ.
ಜತೆಗೆ ದೇಶದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಮೇಲೆ ಸಾಲದ ಹೊರೆ ಹಾಕಿ ಆಡಳಿತ ನಡೆಸಲಾಗಿತ್ತು. ಆದರೆ ನಮ್ಮ ಸರ್ಕಾರ ಏಥನಾಲ್ ಹಾಗೂ ಸೋಲಾರ್ ಪ್ಲಾಂಟ್‌ಗಳ ಸ್ಥಾಪನೆಗೆ ಹೆಚ್ಚಿನ ಗಮನ ನೀಡುವ ಮೂಲಕ ಪರ್ಯಾಯ ಇಂಧನ ಕ್ಷೇತ್ರಕ್ಕೆ ಶಕ್ತಿ ತುಂಬಿದೆ. ಕೇಂದ್ರ ಸರ್ಕಾರದ ಸಾಧನೆ ಜಾಗತಿಕ ವಿದ್ಯಮಾನ ಹಾಗೂ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಕುರಿತು ವಿವರಿಸಿದರು.
ಹಿಂದಿನ ಯುಪಿಎ ಸರ್ಕಾರ ಮಾಡಿದ ತಪ್ಪುಗಳಿಂದಾಗಿ ಅಯಿಲ್ ಬಾಂಡ್ ಹೊರೆ ನಮ್ಮ ಸರ್ಕಾರದ ಮೇಲೆ ಬಿದ್ದಿದೆ. ಜಾಗತಿಕ ಯುದ್ಧಗಳ ಪರಿಣಾಮವಾಗಿ ಇಂದು ವಿಶ್ವದ ಹಲವು ದೇಶಗಳಲ್ಲಿ ಬೆಲೆ ಏರಿಕೆ ಗಗನಕ್ಕೇರಿದೆ. ಆದರೆ ಭಾರತದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಮರ್ಥಿಸಿಕೊಂಡರು.
ನಮ್ಮದು ಭಯೋತ್ಪಾದಕರಿಗೆ ಬಿರಿಯಾನಿ ಕೊಟ್ಟು ಸಾಕುವ ಸರ್ಕಾರವಲ್ಲ. ಇಂದು ದೇಶವನ್ನು ನಕ್ಸಲ್ ಮುಕ್ತ ಭಾರತವನ್ನಾಗಿ ಮಾಡಲಾಗಿದೆ. ವಿದೇಶಗಳಲ್ಲಿ ಭಾರತ ವಿರೋಧಿಗಳು ನಿಗೂಢವಾಗಿ ಸಾಯುತ್ತಿರುವುದರ ಹಿಂದೆ ಚಾಣಕ್ಯನ ನೀತಿ ಅಡಗಿದೆ. ಇಂತಹ ಭಾರತ ವಿರೋಧಿಗಳು ವಿದೇಶದಲ್ಲಿ ಸತ್ತರೆ ಭಾರತೀಯರು ಸಂಭ್ರಮಾಚರಣೆ ಮಾಡಬೇಕು. ಆದರೆ ಕಾಂಗ್ರೆಸ್ ಪಕ್ಷ ಭಯೋತ್ಪಾದಕರನ್ನು ‘ಬ್ರದರ್ಸ್ ’ ಎಂದು ಕರೆಯುತ್ತದೆ ಎಂದರು.
ದೇಶದಲ್ಲಿ ತುಕಡೆ ಗ್ಯಾಂಗ್‌ಗಳು ಅರಾಜಕತೆ ಸೃಷ್ಟಿಸಲು ನಿರಂತರ ಹೋರಾಟ ಮಾಡುತ್ತಿವೆ. ಎಸ್‌ಐಆರ್ ಪರಿಷ್ಕರಣೆಯಾಗಲಿ ಮತ್ತು ದೇಶದಲ್ಲಿ ಕೇವಲ ಶುದ್ಧ ಮತದಾರರು ಮಾತ್ರ ಉಳಿಯಲಿ. ಇದನ್ನು ವಿರೋಧಿಸುವವರೆಲ್ಲರೂ ದೇಶದ್ರೋಹಿಗಳು ಎಂದರು. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ, ಅದು ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ನಿರ್ಧಾರವಾಗುತ್ತದೆ. ಪಕ್ಷದಲ್ಲಿ ಯಾರೇ ಅಧ್ಯಕ್ಷರಾದರೂ ನಾನು ಅವರ ಜೊತೆ ನಿಂತು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದರು. ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಮುಖಂಡರಾದ ರಾಮಲಿಂಗಪ್ಪ, ಪಿ.ಪಾಲಣ್ಣ, ಗುರುಲಿಂಗನಗೌಡ ಇತರರಿದ್ದರು.