ಬಳ್ಳಾರಿ : ಇಲ್ಲಿನ ಹೊರವಲಯದ ಅಂದ್ರಾಳ್ ಕರ್ನಾಟಕ ಗೃಹಮಂಡಳಿ ಕಾಲನಿಯಲ್ಲಿ ಮೂಲ ಸೌಕರ್ಯ ಕೊರತೆಯಿಂದ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕಾಲನಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಎಂ.ನಬಿ ಸಾಹೇಬ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಲನಿಯಲ್ಲಿ ಒಳಚರಂಡಿ ಮತ್ತು ಹೊರಚರಂಡಿ ವ್ಯವಸ್ಥೆ ಹಸ್ತವ್ಯಸ್ತವಾಗಿವೆ. ಇದರಿಂದ ಮನೆಗಳಲ್ಲಿನ ಶೌಚಾಲಯಗಳಿಂದ ದುರ್ವಾಸನೆ ಉಂಟಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಜತೆಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಮಲೇರಿಯಾ, ಡೆಂೆ ಮತ್ತು ಕಾಲರಾದಂತಹ ರೋಗಗಳು ಹರಡುವ ಭೀತಿ ಎದುರಾಗಿದೆ. ವಿದ್ಯುತ್ ಸಂಪರ್ಕ ಅವ್ಯವಸ್ಥಿತವಾಗಿದ್ದು, ಟ್ರಾನ್ಸ್‌ಫಾರ್ಮರ್ ಕೊರತೆಯಿದೆ. ವಿದ್ಯುತ್ ಬೀದಿ ದೀಪಗಳನ್ನು ಅಳವಡಿಸುವಲ್ಲಿ ಜೆಸ್ಕಾಂ ಇಲಾಖೆಯ ನಿರ್ಲಕ್ಷೃ ಕಂಡುಬರುತ್ತಿದೆ. ರಸ್ತೆ ಇಕ್ಕಲಗಳಲ್ಲಿ ಗಿಡಗಂಟೆಗಳು ಬೆಳೆದು ದಾರಿಹೋಕರಿಗೆ ತೊಂದರೆ ಉಂಟಾಗುತ್ತಿದೆ ಎಂದರು.
ಸಿಎ ಸೈಟ್‌ಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದ ಕುಡುಕರಿಗೆ ಅವಕಾಶ ಸಿಗುತ್ತಿದ್ದು, ಅಸಾಮಾಜಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂದು ದೂರಿದರು. ರಾತ್ರಿ ವೇಳೆ ಮಹಿಳೆಯರ, ಹಿರಿಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಪೊಲೀಸ್ ಬೀಟ್ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಸಂಘದ ಪದಾಧಿಕಾರಿಗಳಾದ ಬಸವರಾಜ್, ರಮೇಶ್‌ಬಾಬು, ಸಿ. ಕೃಷ್ಣಾರೆಡ್ಡಿ, ಕೆ.ರಾಮಕೃಷ್ಣ, ಪಿ.ಎಚ್.ಮಂಜುನಾಥ, ಎ.ಮರಿಸ್ವಾಮಿ ಇದ್ದರು.