ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಎಐಯುಟಿಯುಸಿ ಸಂಘಟನೆಯಿಂದ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಎ.ದೇವದಾಸ್, ಉಪಾಧ್ಯಕ್ಷ ಎ.ಶಾಂತ, ಪದಾಧಿಕಾರಿಗಳಾದ ಶರ್ಮಾಸ್, ಜಿ.ಸುರೇಶ್, ಕಿರಣ್‌ಕುಮಾರ ಚೈತನ್ಯ, ಪಾರ್ವತಮ್ಮ, ಹೇಮಣ್ಣ, ಮಹೇಶ್, ಸೋಮಶೇಖರ್ ಇತರರಿದ್ದರು.
ಬಳ್ಳಾರಿ : ನಗರದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಎಐಯುಟಿಯುಸಿ ಸಂಘಟನೆಯಿಂದ ಇಲ್ಲಿನ ನಾರಾಯಣ ರಾವ್ ಪಾರ್ಕ್‌ನಿಂದ ಗಾಂಧಿಭವನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಮೆರವಣಿಗೆಯಲ್ಲಿ ಕಾರ್ಮಿಕರ ಪರ ಘೋಷಣೆಗಳನ್ನು ಕೂಗಿದರು. ಮೆರವಣಿಗೆ ಮುನ್ನ ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಕಾರ್ಲ್ ಮಾರ್ಕ್ಸ್ ಹಾಗೂ ಫೆಡ್ರಿಕ್ ಎಂಗೆಲ್ಸ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
ಎಐಯುಟಿಯುಸಿ ಸಂಘಟನೆ ಜಿಲ್ಲಾಧ್ಯಕ್ಷ ಎ.ದೇವದಾಸ್ ಮಾತನಾಡಿ, ಸಂಕಷ್ಟದ ಪರಿಸ್ಥಿತಿಯಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟಿನಿಂದ ನಿರುದ್ಯೋಗ ಭೀಕರವಾಗಿದೆ. ದೇಶದ ನಾನಾ ಕೈಗಾರಿಕಾ ಕಂಪನಿಗಳಲ್ಲಿ ಲಕ್ಷಾಂತರ ಕಾರ್ಮಿಕರನ್ನು ಹೊರ ಹಾಕಲಾಗುತ್ತಿದೆ. ಕೆಲಸದಲ್ಲಿ ಇರುವ ಕಾರ್ಮಿಕರನ್ನು ಗುಲಾಮರಂತೆ ಕಾಣಲಾಗುತ್ತಿದೆ. ಅತ್ಯಂತ ಕಡಿಮೆ ವೇತನಕ್ಕೆ ಹೆಚ್ಚಿನ ಅವಧಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಬೆಲೆ ಏರಿಕೆಯಿಂದ ಮಧ್ಯಮ ವರ್ಗದವರ ಸ್ಥಿತಿ ಶೋಚನೀಯವಾಗಿದೆ ಎಂದು ಕಿಡಿಕಾರಿದರು.
ಜಿಲ್ಲಾ ಉಪಾಧ್ಯಕ್ಷ ಎ.ಶಾಂತಾ ಮಾತನಾಡಿ, ಎಷ್ಟೇ ಚುನಾವಣೆಗಳೂ ಬಂದರೂ, ಎಷ್ಟೇ ಸರ್ಕಾರಗಳು ಬದಲಾದರೂ ಕಾರ್ಮಿಕ ವಿರೋಧಿ ನೀತಿಗಳು ಮಾತ್ರ ಬದಲಾಗುತ್ತಿಲ್ಲ. ಇಡೀ ವ್ಯವಸ್ಥೆ ಇರುವುದು ಉಳ್ಳವರ ಸೇವೆಗಾಗಿ. ಆದ್ದರಿಂದ, ಕಾರ್ಮಿಕರು ಯಾವುದೇ ಸರ್ಕಾರ ಮೇಲೆ ನಂಬಿಕೆ ಇಟ್ಟುಕೊಳ್ಳದೆ, ಸಂಘಟಿತ ಹೋರಾಟದ ಮೇಲೆ ವಿಶ್ವಾಸ ಇಡಬೇಕು ಎಂದು ಕರೆ ನೀಡಿದರು.