ಕೊಟ್ಟೂರು-ಇಟ್ಟಿಗಿ ರಸ್ತೆ ಹದಗೆಟ್ಟಿರುವುದು.
- ವಾಹನ ಸವಾರರ ಜೀವಕ್ಕೆ ಸಂಚಕಾರ
- ಅನುದಾನದ ನಿರೀಕ್ಷೆಯಲ್ಲಿ ಇಲಾಖೆ
ಕೊಟ್ಟೂರು: ಕೊಟ್ಟೂರು-ಇಟ್ಟಿಗಿ-ಹೂವಿನಹಡಗಲಿ ಮಾರ್ಗದ ರಸ್ತೆ ಹದಗೆಟ್ಟು ತಗ್ಗು ಗುಂಡಿಗಳಾಗಿ ಮಾರ್ಪಟ್ಟಿದ್ದು, ಸವಾರರ ಜೀವಕ್ಕೆ ಕಂಟಕವಾಗಿದೆ.
ಅರಭಾವಿ-ಚಳ್ಳಕೆರೆ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಬೃಹತ್ ವಾಹನಗಳು ಸೇರಿದಂತೆ ಕೊಟ್ಟೂರಿನ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆಯಲು ಪ್ರತಿದಿನ ಈ ಮಾರ್ಗವಾಗಿ ನೂರಾರು ಭಕ್ತರ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಸಂಚರಿಸುತ್ತವೆ.
ಇದು ಕಪ್ಪು ಮಣ್ಣಿನ ರಸ್ತೆಯಾಗಿದ್ದು, ಡಾಂಬಾರು ಸಂಪೂರ್ಣ ಕಿತ್ತುಹೋಗಿದೆ. ರಾತ್ರಿ ವೇಳೆ ದ್ವಿಚಕ್ರ ಸವಾರರ ಸಂಚಾರವಂತೂ ಜೀವಕ್ಕೆ ಸಂಚಕಾರ ತಂದೊಡ್ಡಿದೆ. ಈ ರಸ್ತೆ ಹಗರಿಬೊಮ್ಮನಹಳ್ಳಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ರಸ್ತೆ ಡಾಂಬಾರು ಕಿತ್ತು ಹದಗೆಟ್ಟು ಸವಾರರಿಗೆ ಕಂಟಕವಾಗಿದೆ.
ಕೊಟ್ಟೂರು-ಇಟ್ಟಿಗಿ ಮಾರ್ಗದ ರಸ್ತೆ ಹದಗೆಟ್ಟು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸಿದರೆ ವಾಹನ ಸವಾರರ ಕಷ್ಟವೇನೆಂಬುದು ತಿಳಿಯುತ್ತದೆ.
ಕೊಟ್ಟೂರು-ಇಟ್ಟಿಗಿ ಮಾರ್ಗದ ಕೂಡ್ಲಿಗಿ ಗಡಿಭಾಗ ದಿಂದ ಹಗರಿಬೊಮ್ಮನಹಳ್ಳಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಸ್ತೆಯ ದುರಸ್ತಿಗೆ ಈಗಾಗಲೇ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಿದ್ದೇವೆ. ಅನುದಾನ ಮಂಜೂರಾದ ತಕ್ಷಣ ರಸ್ತೆ ದುರಸ್ತಿ ನಡೆಯಲಿದೆ.