ಬಳ್ಳಾರಿಯ ಪಾಂಚಜನ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿವೇಕಮಂಟಪ-ಉಪನ್ಯಾಸ ಮಾಲಿಕೆಯಲ್ಲಿ ವಿವೇಕ ಲೀಲಾಮೃತ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿ.ವ್ಯವಸ್ಥಾಪಕ ಆರ್.ಎಸ್.ತಿಮ್ಮನಗೌಡ, ವಿಶ್ವ ಬ್ರಾಹ್ಮಣ ವೈದಿಕ ಪ್ರತಿಷ್ಠಾನದ ಕಾರ್ಯದರ್ಶಿ ವೆಂಕಟೇಶ್ ಬಡಿಗೇರ ಇದ್ದರು.
- ಸತ್ಯವನ್ನು ಪರಿಚಯಿಸುವುದೇ ವಿಜ್ಞಾನ
- ತತ್ವಗಳು ಎಂದಿಗೂ ಸಾಯುವುದಿಲ್ಲ
ಬಳ್ಳಾರಿ : ಆಧ್ಯಾತ್ಮವು ಸತ್ಯದ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡುವ ಸಾಧನವಾಗಿದ್ದು, ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡುವ ಸಾರ್ಮಥ್ಯ ಭಾರತಕ್ಕೆ ಮಾತ್ರವಿದೆ ಎಂದು ಗದಗ-ವಿಜಯಪುರ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿನ ಪಾಂಚಜನ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿವೇಕಮಂಟಪ-ಉಪನ್ಯಾಸ ಮಾಲಿಕೆಯಲ್ಲಿ ವಿವೇಕ ಲೀಲಾಮೃತ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧ್ಯಾತ್ಮ ಎಂದರೆ ಅದೊಂದು ವಿಜ್ಞಾನ. ಸತ್ಯವನ್ನು ಪರಿಚಯಿಸುವುದೇ ವಿಜ್ಞಾನ. ಭಾರತ ಆಧ್ಯಾತ್ಮಿಕ ಚಿಂತನೆಯ, ಸಾಧು-ಸಂತರ ದೇಶವಾಗಿದ್ದು ಆಧ್ಯಾತ್ಮಿಕವಾಗಿ ಸಾಧನೆ ಮಾಡಬಯಸುವ ಸಾವಿರಾರು ಜನರು ಭಾರತಕ್ಕೆ ಬರುತ್ತಿದ್ದಾರೆ. ವಿಪರ್ಯಾಸ ಸಂಗತಿ ಎಂದರೆ ಭಾರತೀಯರು ಪಾಶ್ಚಾತ್ಯ ಜೀವನಶೈಲಿಯಲ್ಲಿ ಒಗ್ಗಿಸಿಕೊಂಡು ತಮ್ಮ ದೇಶದ ನಿಜವಾದ ಸಾರ್ಮಥ್ಯವನ್ನೇ ಮರೆತು ಕುಳಿತಿದ್ದಾರೆ ಎಂದರು.
ಭಾರತೀಯರ ಮನಸ್ಥಿತಿಯನ್ನು ಈ ಹಿಂದೆಯೇ ಅರಿತಿದ್ದ ಸ್ವಾಮಿ ವಿವೇಕಾನಂದರು ಯುವಕರನ್ನು ಕುರಿತು. ಏಳಿ ಎದ್ದೇಳಿ ಎಂದು ಕರೆ ನೀಡಿದ್ದರು. ಆದರೆ, ಯುವಕರು ಭಾರತೀಯನ್ನು ಮೈಗೂಡಿಸಿಕೊಳ್ಳದೆ, ಆಧ್ಯಾತ್ಮಿಕ ಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳದೆ ಪಾಶ್ಚಾತ್ಯ ಜೀವನಶೈಲಿಯೇ ಶ್ರೇಷ್ಠ ಎಂಬ ಮೌಢ್ಯದಲ್ಲಿ ಬದುಕುತ್ತಿದ್ದಾರೆ ಎಂದರು.
ತತ್ವಗಳು ಎಂದಿಗೂ ಸಾಯುವುದಿಲ್ಲ. ಅವು ಸಾರ್ವತ್ರಿಕವಾಗುತ್ತವೆ. ವಿಜ್ಞಾನವೂ ಒಂದು ಸಾರ್ವತ್ರಿಕ ತತ್ವದ ಆಧಾರದ ಮೇಲೆ ಬೆಳೆದಿರುವುದರಿಂದ ಅದು ಎಲ್ಲ ಕಾಲದಲ್ಲೂ ಅನ್ವಯಗೊಳ್ಳುತ್ತದೆ. ತತ್ವಗಳಿಲ್ಲದೆ ನಿಜವಾದ ವಿಕಾಸ ಸಾಧ್ಯವಿಲ್ಲ. ತತ್ವಗಳ ಮೇಲೆ ನಿಂತಿರುವ ಏಕೈಕ ಧರ್ಮವೇ ಸನಾತನ ಧರ್ಮವಾಗಿದೆ ಎಂದು ವಿವರಿಸಿದರು.