- ಷರತ್ತುಗಳ ಪೂರೈಕೆಗೆ ಮನವಿ
- ಸರ್ಕಾರಕ್ಕೆ ಶಿಫಾರಸುಗೊಳಿಸಿದ ಇಲಾಖೆ
ಬಳ್ಳಾರಿ : ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ನಡೆಸಲು ಉದ್ದೇಶಿಸಿರುವ ಕೆಐಒಸಿಎಲ್ ಕಂಪನಿಯೂ ಅರಣ್ಯ ಗುತ್ತಿಗೆ ಕರಾರು ಇತ್ತೀಚಿಗೆ ಪೂರ್ಣಗೊಂಡಿದ್ದು, ಒಂದು ವರ್ಷದ ಅವಧಿಗೆ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರಿದೆ.
ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ಸ್ವಾಮಿಮಲೈ (ಎಸ್‌ಎಂ) ಬ್ಲಾಕ್‌ನ 401.761 ಹೆಕ್ಟೇರ್ (992 ಎಕರೆ) ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಉದ್ದೇಶಿಸಿತ್ತು. ಈಗಾಗಲೇ ಅಪಾರ ಗಣಿಗಾರಿಕೆಯಿಂದ ಹಾಳಾಗಿರುವ ಅರಣ್ಯ ಪ್ರದೇಶವೂ ಪುನಶ್ಚೇತನವಾಗಿಲ್ಲ ಎಂಬುದಾಗಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಜತೆಗೆ ಸಾವಿರಾರು ಮರಗಳ ಹನನದ ವಿವಾದದಿಂದ ಕೂಡಿದ ಈ ಗಣಿ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ (ಎಂಇಎಫ್‌ಸಿಸಿ) ಹಾಗೂ ರಾಜ್ಯ ಸರ್ಕಾರ ಕೆಲ ಕಠಿಣ ಷರತ್ತುಗಳನ್ನು ವಿಧಿಸಲಾಗಿತ್ತು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಪನಿಯು ಈ ಹಿಂದೆ ಗಣಿಗಾರಿಕೆ ವೇಳೆ ಮಾಡಿದ್ದ ಪರಿಸರ ನಿಯಮ ಉಲ್ಲಂಘನೆ ಹಾಗೂ ವಿವಿಧ ಬಾಕಿ ಹಣ ಪಾವತಿಸುವುದು ಮುಖ್ಯವಾಗಿತ್ತು. ಈ ಷರತ್ತನ್ನು ಪಾಲಿಸುವುದಾಗಿ 2025ರ ಆಗಸ್ಟ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೆಐಒಸಿಎಲ್ ರಾಜ್ಯ ಸರ್ಕಾರಕ್ಕೆ ಕಂಪನಿಯೂ ಮುಚ್ಚಳಿಕೆಯಲ್ಲಿ ಸಲ್ಲಿಸಿತ್ತು. ಇದರ ಆಧಾರದಲ್ಲಿ 2025ರ ಅಕ್ಟೋಬರ್‌ಲ್ಲಿ ಅರಣ್ಯ ಭೂಮಿ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಒಪ್ಪಂದವನ್ನು 2025ರ ಅಕ್ಟೋಬರ್‌ನಲ್ಲಿ ನೋಂದಣಿ ಮಾಡಿಸಲಾಗಿತ್ತು. ಷರತ್ತುಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಗಣಿ ಗುತ್ತಿಗೆಯನ್ನೇ ರದ್ದು ಮಾಡುವುದಾಗಿಯೂ ಅರಣ್ಯ ಇಲಾಖೆಯು ಕೆಐಒಸಿಎಲ್ ಜತೆಗೆ ಮಾಡಿಕೊಂಡ ಅರಣ್ಯ ಭೂಮಿ ಗುತ್ತಿಗೆ ಒಪ್ಪಂದದಲ್ಲಿ ಉಲ್ಲೇಖಿಸಿತ್ತು. ಸದ್ಯ, ಒಪ್ಪಂದ ಜಾರಿ ಬಂದು ಒಂಬತ್ತು ತಿಂಗಳಿಗೂ ಅಧಿಕ ಕಳೆದರೂ ಕಂಪನಿ ಷರತ್ತುಗಳು ಪಾಲಿಸಿಲ್ಲ. ಈಚೆಗೆ ಕಂಪನಿಯ ಗುತ್ತಿಗೆ ಕರಾರು ಪೂರ್ಣಗೊಂಡಿತ್ತು.
ಏನಿದು ಷರತ್ತು: ಚಿಕ್ಕಮಗಳೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವಾಗ ಕೆಐಒಸಿಎಲ್ ಲಖ್ಯಾ ಅಣೆಕಟ್ಟಿನ ಎತ್ತರ ಹೆಚ್ಚಿಸಿತ್ತು. ಆಗ ಮುಳುಗಡೆಯಾದ 340 ಹೆಕ್ಟೇರ್ ಅರಣ್ಯ ಜಮೀನು ಸಕ್ರಮಗೊಳಿಸಬೇಕು. ರಾಷ್ಟ್ರೀಯ ಉದ್ಯಾನದಲ್ಲಿ ಕೆಐಒಸಿಎಲ್ ಹೊಂದಿರುವ 114.3 ಹೆಕ್ಟೇರ್ ಭೂಮಿ ಮತ್ತು ಅದರಲ್ಲಿರುವ ನಿರ್ಮಿತಿಗಳನ್ನು ಹಸ್ತಾಂತರಿಸಬೇಕು. ಅದಿರು ಸಾಗಣೆಗೆ ಮಾಡಿದ್ದ ಸದರಿ ಪೈಪ್‌ಲೈನ್‌ಗೆ ಬಳಸಿಕೊಂಡ 53.82 ಹೆಕ್ಟೇರ್ ಭೂಮಿ ಸಕ್ರಮಗೊಳಿಸಬೇಕು.
ಹೆಚ್ಚುವರಿಯಾಗಿ ಬಳಸಿಕೊಂಡ 56.28 ಹೆಕ್ಟೇರ್ ಅರಣ್ಯ, ನೀಲಿಬೀಡಿನಲ್ಲಿ ಹೊಸ ರಸ್ತೆ ನಿರ್ಮಾಣಕ್ಕಾಗಿ ಬಳಸಿಕೊಂಡ 13.68 ಹೆಕ್ಟೆರ್ ಸೇರಿದಂತೆ ಇನ್ನುಳಿದ ಇತರ ಜಾಗಗಳನ್ನು ಅರಣ್ಯ ಕಾಯ್ದೆ ಅಡಿಯಲ್ಲಿ ಇತ್ಯರ್ಥ ಮಾಡಿಕೊಳ್ಳಬೇಕು. ಗಣಿಗಾರಿಕೆ ವೇಳೆ ಉಳಿಸಿಕೊಂಡಿರುವ ಪರ್ಮಿಟ್ ಶುಲ್ಕ ಮತ್ತು ಅರಣ್ಯ ಗುತ್ತಿಗೆ ಬಾಡಿಗೆಯ ಅಸಲು ಮೊತ್ತವನ್ನು ಕೆಐಒಸಿಎಲ್ ಪಾವತಿಸಬೇಕಾಗಿದೆ. ಇದರ ಒಟ್ಟು ಮೌಲ್ಯ 4,557 ಕೋಟಿ ರೂ. ಪಾವತಿಸಬೇಕು ಎಂಬುದಾಗಿ ಷರತ್ತು ನಲ್ಲಿ ತಿಳಿಸಲಾಗಿತ್ತು.
ಕೆಐಒಸಿಎಲ್ ಕಂಪನಿಗೆ ಷರತ್ತು ಪಾಲಿಸದೆ ಗಣಿಗಾರಿಕೆಗಾಗಿ ಡ್ರೋನ್ ಸಮೀಕ್ಷೆ, ಮರಗಳ ಎಣಿಕೆಗೆ ಷರತ್ತು ಬದ್ಧ ತಾತ್ಕಾಲಿಕ ಅನುಮತಿ ಸಿಕ್ಕಿತ್ತು. ಸದ್ಯ, ಅರಣ್ಯ ಗುತ್ತಿಗೆ ಕರಾರು ಪೂರ್ಣಗೊಂಡ ಬೆನ್ನಲ್ಲೇ ಒಂದು ವರ್ಷ ಅವಧಿಗೆ ವಿಸ್ತರಿಸುವಂತೆ ಕೋರಿದ್ದು, ರಾಜ್ಯ ಸರ್ಕಾರ ಸಮ್ಮತಿಸುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
"
ಕೋಟ್.... ಕೆಐಒಸಿಎಲ್ ಕಂಪನಿಯೂ ಅರಣ್ಯ ಗುತ್ತಿಗೆ ಕರಾರು ಒಂದು ವರ್ಷ ಅವಧಿಗೆ ವಿಸ್ತರಿಸುವಂತೆ ಇಲಾಖೆಗೆ ಮನವಿ ಸಲ್ಲಿಸಿತ್ತು. ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.- ಡಾ.ಕೆ.ಎನ್.ಬಸವರಾಜ್, ಡಿಸಿಎಫ್, ಬಳ್ಳಾರಿ.