ಬಳ್ಳಾರಿಯ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಸಿದ್ದಲಿಂಗಪ್ರಭು ಸಸಿ ನೆಟ್ಟು ನಿರೂಣಿಸಿದರು. ನ್ಯಾಯಾಧೀಶರಾದ ರಾಘವೇಂದ್ರ ಗೌಡ.ಬಿ.ಜಿ., ಪ್ರಮೋದ.ಬಿ.ಜಿ., ವಾಸುದೇವ ರಾಧಕಾಂತ್ ಗುಡಿ, ವೆಂಕಟೇಶ್, ಇಬ್ರಾಹಿಂ ಮುಜಾವರ್ ಇತರರಿದ್ದರು. 
ಬಳ್ಳಾರಿ

ಪ್ರಕೃತಿ ಸಮತೋಲದಲ್ಲಿಡಿ

ಪ್ರಮುಖ ಮುಖ್ಯಾಂಶಗಳು

  • ಭವಿಷ್ಯದ ಪೀಳಿಗೆಗೆ ಉಳಿಸಬೇಕಾದ ಜವಾಬ್ದಾರಿ
  • ಪರಿಸರ ಕಾಳಜಿ ವಹಿಸಿದರೆ ಸಾಲದು
ಬಳ್ಳಾರಿ ; ಗಿಡ-ಮರಗಳನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಸಮತೋಲನದಲ್ಲಿಡಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಸಿದ್ದಲಿಂಗಪ್ರಭು ಹೇಳಿದರು. ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಅರಣ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಸಹಯೋಗದೊಂದಿಗೆ ಪ್ರಕೃತಿಯಿಂದ ಪ್ರೇರಿತ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ನಿರೂಣಿಸಿ ಮಾತನಾಡಿದರು.
ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳ ಬಳಕೆಯನ್ನು ಕಡಿಮೆ ಮಾಡಿ, ಅವುಗಳನ್ನು ವೈಜ್ಞಾನಿಕ ಹಾಗೂ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಮುಖ್ಯವಾಗಿದೆ. ನೈಸರ್ಗಿಕ ಇಂಧನ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ, ಭವಿಷ್ಯದ ಪೀಳಿಗೆಗೆ ಉಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಎ.ಮೋಹನ್ ಮಾತನಾಡಿ, ಕೈಗಾರಿಕೀಕರಣ ಹಾಗೂ ಮಾನವನ ಬೇಜವಾಬ್ದಾರಿತನದಿಂದಾಗಿ ಶುದ್ಧವಾದ ಗಾಳಿ ಮತ್ತು ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಸರ್ಕಾರ ಅಥವಾ ಇಲಾಖೆಗಳು ಮಾತ್ರ ಪರಿಸರ ಕಾಳಜಿ ವಹಿಸಿದರೆ ಸಾಲದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂದು ಹೇಳಿದರು.
==