ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಅಭಿಯಾನ ನಿಮಿತ್ತ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಜಿ.ಅರುಣ್ ಮಾತನಾಡಿದರು. ತಹಸೀಲ್ದಾರ್ ಜೂಗಲ ಮಂಜುನಾಯಕ, ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಇತರರಿದ್ದರು.
ಪೋಲಿಯೋ ಅಭಿಯಾನ ಯಶಸ್ಸಿಗೆ ಸಹಕರಿಸಿ
ತಹಸೀಲ್ದಾರ್ ಜೂಗಲ ಮಂಜುನಾಯಕ ಮನವಿ
ಕಂಪ್ಲಿ: ಪೋಲಿಯೋಮುಕ್ತ ರಾಷ್ಟ್ರಕ್ಕಾಗಿ ಆರೋಗ್ಯ ಇಲಾಖೆ ಹಾಕಿಕೊಂಡ ಗುರಿಯನ್ನು ಶೇ.100 ಸಾಧಿಸಬೇಕಿದೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ನಿಮಿತ್ತ ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಆರೋಗ್ಯ ಹಾಗೂ ಇತರ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಿ ಟಾಸ್ಕ್‌ಫೋರ್ಸ್ ಸಮಿತಿ ಗುರಿ ತಲುಪಲು ಸಹಕರಿಸಬೇಕಿದೆ ಎಂದರು.
ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಜಿ.ಅರುಣ್ ಮಾತನಾಡಿ, ಪಲ್ಸ್ ಪೋಲಿಯೋ ಅಭಿಯಾನ ಯಶಸ್ಸಿಗಾಗಿ ಮೇಲ್ವಿಚಾರಕರ ನೇಮಕ ಸೇರಿದಂತೆ ಇತರ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಪಶು ವೈದ್ಯಾಧಿಕಾರಿ ಕೆ.ಯು.ಬಸವರಾಜ ಮಾತನಾಡಿ, ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಬೀದಿನಾಯಿ ಹಾವಳಿ ತಪ್ಪಿಸಲು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಪ್ರಮುಖ ಅಧಿಕಾರಿಗಳು ನಾಯಿಗಳ ಕುರಿತು ಪುರಸಭೆಗೆ ಅಂಕಿ-ಅಂಶ ನೀಡಬೇಕೆಂದರು.
ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಮಾತನಾಡಿ, ತಾತ್ಕಾಲಿಕ ಶೆಡ್ ತೆರೆದು ಬೀದಿ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿದ ನಂತರ ರಕ್ಷಿಸಲಾಗುವುದು. ಆಹಾರ ಮಾರಾಟಗಾರರಿಗೆ ಸೂಕ್ತ ತಿಳುವಳಿಕೆ ನೀಡಲಾಗುವುದು. ಕಸವನ್ನು ತಿಪ್ಪೆಗೆ ಎಸೆಯದೆ ಕಸ ವಿಲೇವಾರಿ ವಾಹನಗಳಿಗೆ ನೀಡುವ ಮೂಲಕ ಬೀದಿ ನಾಯಿ ಉಪಟಳ ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಶಿರಸ್ತೇದಾರ್ ಎಸ್.ಡಿ.ರಮೇಶ, ಮೆಟ್ರಿ ಪಿಡಿಒ ಶ್ರೀಶೈಲ ಗೌಡ, ಮಹಿಳಾ ಮೇಲ್ವಿಚಾರಕಿ ಲತಿಫಾ ಬೇಗಂ ಇತರರಿದ್ದರು.